ನಾಗಠಾಣ ಕ್ಷೇತ್ರದಲ್ಲಿ ಅಭವೃದ್ಧಿ ಮರೀಚಿಕೆ, ಶಾಸಕರು, ಕಾರ್ಪೋರೇಟರ್‌ಗಳು ಅನುದಾನ ಕೇಳಬೇಕು ರವೀಂದ್ರ ಲೋಣಿ

raveendra loni press meet
ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಕಾರ್ಪೋರೇಟರ್ ರವೀಂದ್ರ ಲೋಣಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇದ್ದಾರೆ.
Published on

ವಿಜಯಪುರ: ಶಾಸಕರು ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಅನುದಾನಕ್ಕಾಗಿ ಶ್ರಮಿಸದ ಕಾರಣಕ್ಕೆ ನಾಗಠಾಣ ವಿಧಾನ ಸಭೆ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರವೀಂದ್ರ ಲೋಣಿ ಆಪಾದಿಸಿದರು.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ನಾಗಠಾಣ ಕ್ಷೇತ್ರದ ವಾರ್ಡ್‌ಗಳಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅಲ್ಲಿನ ಸದಸ್ಯರು ಸಹ ಅನುದಾನಕ್ಕಾಗಿ ಬೇಡಿಕೆ ಇರಿಸಬೇಕಿತ್ತು. ಈವರೆಗೆ ಯಾಕೆ ಕೇಳಿಲ್ಲವೆಂಬುದು ಗೊತ್ತಿಲ್ಲ, ಇದೀಗ ಮೇಯರ್ ಮತ್ತು ಉಪಮೇಯರ್ ಬಿಜೆಪಿಯವರೇ ಆಗಿದ್ದರಿಂದ ಅಭಿವೃದ್ಧಿ ನಿರೀಕ್ಷೆ ಇದೆಯಾದರೂ ಅನುದಾನದ ಕೊರತೆ ಕಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

2008 ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಬಳಿಕ ನಾಗಠಾಣ ವಿಧಾನ ಸಭೆ ಕ್ಷೇತ್ರ ಎಸ್‌ಸಿಗೆ ಮೀಸಲಾಯಿತು. ವಿಜಯಪುರ ನಗರದ ಆರು ವಾರ್ಡ್‌ಗಳು ನಾಗಠಾಣ ಕ್ಷೇತ್ರಕ್ಕೆ ಸೇರ್ಪಡೆಯಾದವು. ನಗರದ ಶೇ. 30 ರಷ್ಟು ಜನಸಂಖ್ಯೆ ನಾಗಠಾಣ ಕ್ಷೇತ್ರಕ್ಕೆ ಹಂಚಿ ಹೋಯಿತು. ಭೌಗೋಳಿಕವಾಗಿ ಅತ್ಯಂತ ಹೆಚ್ಚು ವಿಸ್ತೀರ್ಣ ಹೊಂದಿದ ಈ ಕ್ಷೇತ್ರ ಅಭಿವೃದ್ಧಿ ಕಾಣುತ್ತಿಲ್ಲ. ರಮೇಶ ಜಿಗಜಿಣಗಿ ಅವರು ಚಿಕ್ಕೋಡಿಗೆ ಹೋದ ಬಳಿಕ ಆರ್.ಕೆ.ರಾಠೋಡ, ವಿಠಲ ಕಟಲದೊಂಡ, ದೇವಾನಂದ ಚವ್ಹಾಣ್, ರಾಜು ಆಲಗೂರ ಆಡಳಿತ ನಡೆಸಿದರಾದರೂ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ ಎಂದರು.

ಚಡಚಣ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಪ್ರಗತಿ ಕಂಡಿಲ್ಲ. ತಿಡಗುಂದಿ ಕಾಲುವೆಯಿಂದ ನೀರಾವರಿ ಸೌಲಭ್ಯ ಸಿಗುತ್ತಿಲ್ಲ. ರಸ್ತೆಗಳು ಹಾಳಾಗಿವೆ. ತಗ್ಗು ದಿನ್ನೆಯಿಲ್ಲದೇ ಒಂದೇ ಒಂದು ರಸ್ತೆ ತೋರಿಸಿದರೆ ಬಹುಮಾನ ನೀಡುವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಕಾಮಗಾರಿ ಕುಂಠಿತಗೊಂಡಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಶಿವಣಗಿ, ಕನ್ನೂರ, ಹಿಟ್ನಳ್ಳಿ, ಜುಮನಾಳ ಭಾಗದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದರು.

ನಗರದ ವಾರ್ಡ್‌ಗಳಲ್ಲಿ ಮಳೆ ನೀರು ಮನೆಗೆ ನುಗ್ಗುತ್ತಿದೆ. ರಸ್ತೆಗಳು ಹಾಳಾಗಿವೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಾಗಿದೆ. ಶಾಸಕರು ಇದ್ದಾರೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಶಾಸಕ ವಿಠಲ ಕಟಕದೊಂಡಗೆ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲವೋ? ಸಹಕಾರ ಇಲ್ಲವೋ? ಬಿಜೆಪಿಯಿಂದ ಬಂದರೆಂಬ ಕಾರಣಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲವೋ? ಉಸ್ತುವಾರಿ ಸಚಿವರ ಜೊತೆಗೇ ಇದ್ದರೂ ನಿರ್ಲಕ್ಷೃಕ್ಕೊಳಗಾದರಾ ಅಥವಾ ದಲಿತ ನಾಯಕ ಎಂಬ ತಾತ್ಸಾರವೋ....? ಎಂದು ಪ್ರಶ್ನಿಸಿದ ಲೋಣಿ, ಬಿಎಲ್ಡಿಇ ಎದುರು ಭಾಗದಲ್ಲೇ ನಾಗಠಾಣ ಕ್ಷೇತ್ರವಿದೆ. ಸಮಸ್ಯೆ ಕಣ್ಣಿಗೆ ರಾಚುತ್ತದೆ. ಹೀಗಾಗಿ ಇನ್ನಾದರೂ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net