

ಜಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಅಭಿವೃದ್ಧಿ ಕುಂಠಿತವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಮತದಾರರು ಬಿಜೆಪಿ ಪರ ಮತ ಚಲಾಯಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ನಾಯಕಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ಜಗಳೂರಿನಲ್ಲಿ ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದರು.
ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ನಾಯಕರು ಒಂದಿಲ್ಲೊಂದು ವಿವಾದ ಸೃಷ್ಟಿಸಿ ದಿನ ಕಳೆಯುತ್ತಿದ್ದಾರೆ.ಹೀಗಾಗಿ ಅಭಿವೃದ್ಧಿ ಶೂನ್ಯವಾಗಿದೆ. ಜನಸಾಮಾನ್ಯರು ರೋಸಿ ಹೋಗಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಯುವಕರು ಸದಸ್ಯತ್ವ ಪಡೆಯುತ್ತಿದ್ದಾರೆ. ತಾಲೂಕಿನಲ್ಲೂ ರಾಜೇಶ್ ಮತ್ತು ನಾನು ಜತೆಗೂಡಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಜಿಪಂ ಮತ್ತು ತಾಪಂ ಚುನಾವಣೆ ಘೋಷಣೆಯಾದರೆ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವುದು ನಿಶ್ಚಿತ ಎಂದರು.
ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದೇವೆ. ಮತದಾರರ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ಈಗಿನ ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ಜತೆಗೆ ಶಾಸಕರು ಮತದಾರರ ಸಮಸ್ಯೆಗಳಿಗೆ ಕಿವಿಗೊಡಬೇಕು ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಜಗಳೂರಲ್ಲಿ ಬಿಜೆಪಿ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಈಗಿನ ಶಾಸಕರು ಭೂಮಿಪೂಜೆ ಮಾಡುತ್ತಿದ್ದಾರೆ. ಆದರೆ, ಸರ್ಕಾರದಿಂದ ಯಾವ ಅನುದಾನವೂ ಬಿಡುಗಡೆ ಆಗಿಲ್ಲ ಎಂದು ಆರೋಪಿಸಿದರು.
ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ಹಾಳಾಗಿವೆ. ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು ಮೂಲೆ ಸೇರಿವೆ. ಗ್ರಾಮೀಣ ಪ್ರದೇಶಗಳ ಜನರು ಮೂಲ ಸೌಕರ್ಯಗಳಿಂದ ನಲುಗುತ್ತಿದ್ದಾರೆ ಎಂದು ಕುಟುಕಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಪಪಂ ಅಧ್ಯಕ್ಷ ಕೆ.ಎಸ್. ನವೀನ ಕುಮಾರ್, ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ಪಪಂ ಉಪಾಧ್ಯಕ್ಷೆ ಜೆ.ಬಿ.ಲೋಕಮ್ಮ ಓಬಳೇಶ್, ತಾಪಂ ಮಾಜಿ ಸದಸ್ಯರಾದ ಕಾನನಕಟ್ಟೆ ಕುಬೇಂದ್ರಪ್ಪ, ಕೆ.ಎನ್. ಸಿದ್ದೇಶ್, ಸದಸ್ಯತ್ವ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಮರುಳಾರಾಧ್ಯ, ಮುಖಂಡ ಬಿಸ್ತುವಳ್ಳಿ ಬಾಬು ಮತ್ತಿತರರಿದ್ದರು.