ನಗರಸಭೆಯಲ್ಲಿ ಅಭಿವೃದ್ಧಿ ಪೂರಕ ಬಜೆಟ್​

3
ಮುಳಬಾಗಿಲು ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಆಯವ್ಯಯ ಬಜೆಟ್​ ಪ್ರತಿಯನ್ನು ಶಾಸಕ ಸಮೃದ್ಧಿ ಮಂಜುನಾಥ್​ ಬಿಡುಗಡೆ ಮಾಡಿದರು. ನಗರಸಭೆ ಅಧ್ಯಕ್ಷೆ ಶಬಾನಾ ಬೇಗಂ, ಉಪಾಧ್ಯಕ್ಷೆ ಸರಳ ನವೀನ್​ ಕುಮಾರ್​, ಪೌರಾಯುಕ್ತ ವಿ.ಶ್ರೀಧರ್​, ಕಂದಾಯ ಅಧಿಕಾರಿ ತ್ಯಾಗರಾಜ್​, ಸಹಾಯಕ ಕಾರ್ಯಪಾಲಕ ಅಧಿಕಾರಿ ವೆಂಕಟಾಚಲಪತಿ, ನೋಡಲ್​ ಅಧಿಕಾರಿ ಸುನಿಲ್​ ರಾಜು, ಆರೋಗ್ಯ ಅಧಿಕಾರಿ ವಿ.ಪ್ರತಿಭಾ ಇದ್ದರು.
Published on

ಮುಳಬಾಗಿಲು ಸಮಗ್ರ ಅಭಿವೃದ್ಧಿ ನಿರೀಕ್ಷೆ -ಇನ್​ಡೋರ್​ ಕ್ರೀಡಾಂಗಣ ನಿರ್ಮಾಣ

ಮುಳಬಾಗಿಲು: ಮುಳಬಾಗಿಲು ನಗರಸಭೆಯು ಶಾಸಕ ಸಮೃದ್ಧಿ ಮಂಜುನಾಥ್​ ನೇತೃತ್ವದಲ್ಲಿ ಈ ಬಾರಿ 24 ಲಕ್ಷ ರೂ. ಉಳಿತಾಯ ಬಜೆಟ್​ಅನ್ನು ಮಂಗಳವಾರ ಮಂಡಿಸಿದೆ.

ಆಸ್ತಿ ತೆರಿಗೆ, ನೀರಿನ ತೆರಿಗೆ, ನೀರು ಸರಬರಾಜು ಶುಲ್ಕ, ವಾಣಿಜ್ಯ ಮಳಿಗೆಗಳ ಬಾಡಿಗೆ, ವಿವಿಧ ಬಾಬ್ತುಗಳ ಹರಾಜು, ಅಭಿವೃದ್ಧಿ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ, ದಂಡ ಹಾಗೂ ಜುಲ್ಮಾನೆ, ಕೇಂದ್ರ ಸರ್ಕಾರದ ಅನುದಾನ, ಘನ ತ್ಯಾಜ್ಯ ನಿರ್ವಹಣೆ, ರಾಜ್ಯ ಸರ್ಕಾರದ ಅನುದಾನ, ಸಿಬ್ಬಂದಿ ವೇತನ ಅನುದಾನ, ವಿದ್ಯುತ್​ ಬಿಲ್ಲುಗಳು, ಉದ್ದಿಮೆ ಪರವಾನಿಗೆಗಳು ನಗರೋತ್ಥಾನ ಮತ್ತಿತರ ಸೇರಿ ಒಟ್ಟು 31 ಮೂಲಗಳಿಂದ ಆದಾಯ ಹಾಗೂ ನೀರು ಸರಬರಾಜು ಸೇರಿ ಹಲವಾರು ಯೋಜನೆಗಳು ಹಾಗೂ ಸಮಸ್ಯೆಗಳನ್ನು ಈಡೇರಿಸಲು ಒಟ್ಟು ರ್ಖಚನ್ನು ಪರಿಗಣಿಸಿ ಅಂದಾಜು ಬಜೆಟ್​ ಮಂಡಿಸಲಾಗಿದೆ.

ಸಾಮಾನ್ಯ ಸಭೆಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್​ ಮಾತನಾಡಿ, ನಗರದಲ್ಲಿ ಈಗಾಗಲೇ ಬೇಸಿಗೆಯ ಪರಿಣಾಮವಾಗಿ ಹಲವೆಡೆ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಸಮಸ್ಯೆ ನಿವಾರಣೆಗೆಗಾಗಿ ಟಾಸ್ಕ್​ ಫೋರ್ಸ್​ ಸಮಿತಿಯನ್ನು ರಚಿಸಿ, ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿಗೆ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಲು, ಇಲ್ಲವೇ ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಡಿವಿಜಿ ಗಡಿ ಭವನವನ್ನು ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ರಂಗಮಂದಿರ ನಿಮಾರ್ಣ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಹಾಗೆಯೇ ನೇತಾಜಿ ಕ್ರೀಡಾಂಗಣದಲ್ಲಿ ಇನ್​ಡೋರ್​ ಕ್ರೀಡಾಂಗಣ ನಿರ್ಮಿಸಲಾಗುವುದು ಹಾಗೂ ಶಾರದಾ ಕಾಲೇಜು ರಸ್ತೆಗೆ ಸಿಮೆಂಟ್​ ರಸ್ತೆ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದರು.

ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡಿ

ನಗರಸಭೆಯ ಅಧಿಕಾರ ಕೇವಲ 5 ತಿಂಗಳಿದ್ದು, ಎಲ್ಲರೂ ರಾಜಕೀಯ ಬದಿಗಿಟ್ಟು ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ನಗರಸಭೆಯಲ್ಲಿ ಯಾವುದೇ ಸಭೆಗಳನ್ನು ನಡೆಸಲು ಅಧ್ಯಕ್ಷರು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಕೆಲ ಸದಸ್ಯರು ಸಭೆಯಲ್ಲಿ ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸಭೆಗೂ ಮುನ್ನ 7 ದಿನಗಳ ಒಳಗೆ ಎಲ್ಲ ಸದಸ್ಯರಿಗೆ ಮಾಹಿತಿಯನ್ನು ಏಕೆ ನೀಡಲಿಲ್ಲ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು. ಬಳಿಕ ಸದಸ್ಯರು ತಮ್ಮತಮ್ಮ ವಾರ್ಡ್​ನಲ್ಲಿನ ರಸ್ತೆ, ಕುಡಿಯುವ ನೀರು, ಕೊಳವೆ ಬಾವಿ ಮತ್ತಿತರ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net