

ಬೆಳಗಾವಿ: ಬೆಳಗಾವಿ ಅಭಿವೃದ್ಧಿಗೆ ದಿ.ಸುರೇಶ ಅಂಗಡಿ ಕೊಡುಗೆ ಅಪಾರವಾಗಿದೆ. ಅವರು ಆರಂಭಿಸಿದ್ದ ಅಭಿವೃದ್ಧಿ ಪರ್ವ ಮುಂದುವರಿಸಲು ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರನ್ನು ಗೆಲ್ಲಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಕಾರ್ಯಕರ್ತರಲ್ಲಿ ವಿನಂತಿಸಿದ್ದಾರೆ.
ಲೋಕಸಭಾ ಉಪಚುನಾವಣೆ ಪ್ರಚಾರಾರ್ಥ ನಗರದ ಧರ್ಮನಾಥ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಯಾವ ಮುಖ ಹೊತ್ತು ಬೆಳಗಾವಿಗೆ ಓಟು ಕೇಳಲು ಬರುತ್ತಾರೆ? ಅವರು ಮಾಡಿರುವ ಅಭಿವೃದ್ಧಿ ಕೆಲಸವಾದರೂ ಯಾವುದು ಎಂದು ಶೆಟ್ಟರ್ ಪ್ರಶ್ನಿಸಿದರು.
ನಿಂತ ನೀರಾದ ಕಾಂಗ್ರೆಸ್: ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ನಿಂತ ನೀರಾಗಿದೆ. ಆ ಪಕ್ಷ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ. ಈಗಾಗಲೇ ರಾಜ್ಯದಲ್ಲಿ ಒಬ್ಬರೇ ಸಂಸದರಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಶೂನ್ಯಕ್ಕಿಳಿಯಲಿದೆ. ದೂರದರ್ಶಕ ಹಿಡಿದು ಅವರ ಸಂಸದ-ಶಾಸಕರು ಯಾರಿದ್ದಾರೆ ಎಂದು ಹುಡುವ ಸ್ಥಿತಿ ನಿರ್ಮಾಣ ಆಗಲಿದೆ. ಅಷ್ಟೊತ್ತಿಗೆ ರಾಜ್ಯದಲ್ಲಿ ಬಂಡೆಯ ಖದರೂ ಇರುವುದಿಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕಾರ್ಯಕರ್ತರು ಇದ್ದರು.
ಸುರೇಶ ಅಂಗಡಿಯವರು ಈ ಹಿಂದೆ 4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಅವರ ಧರ್ಮಪತ್ನಿ ಮಂಗಲ ಅವರನ್ನು 5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಶ್ರಮ ವಹಿಸುತ್ತಿದ್ದೇವೆ. | ಉಮೇಶ ಕತ್ತಿ ಸಚಿವ