ಒದ್ದಾಡುತ್ತಿದೆ ಮೀನುಗಾರಿಕೆ ಇಲಾಖೆ

03
Published on

ಬೆಳಗಾವಿ: ಸಿಬ್ಬಂದಿ ಕೊರತೆಯಿಂದ ಮೀನುಗಾರಿಕೆ ಇಲಾಖೆ ತತ್ತರಿಸಿದೆ. ನೀರಿನಿಂದ ಹೊರ ತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿದೆ. ಹೀಗಾಗಿ ಇಲಾಖೆಯಲ್ಲಿನ ಅಭಿವೃದ್ಧಿ ಯೋಜನೆಗೆ ಪೆಟ್ಟು ಬಿದ್ದಿದೆ.

ಹಲವು ವರ್ಷಗಳಿಂದ ರಾಜ್ಯಾದ್ಯಂತ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ 70 ಹುದ್ದೆಗಳು ಖಾಲಿ ಇವೆ. ಜತೆಗೆ, ಮೀನುಗಾರಿಕೆ ಕ್ಷೇತ್ರ ಪಾಲಕರ 337 ಹುದ್ದೆಗಳೂ ಭರ್ತಿಯಾಗಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಇರುವ ಸಿಬ್ಬಂದಿ
ಮೇಲೆ ನಿತ್ಯದ ಕಾರ್ಯಭಾರ ಹೆಚ್ಚಾಗುತ್ತಿದೆ.

ಕಳೆದ ಐದಾರು ವರ್ಷದಿಂದ ಬೆಳಗಾವಿ ವಿಭಾಗದ ಮೀನುಗಾರಿಕೆ ಇಲಾಖೆಯಲ್ಲಿ 51 ಹುದ್ದೆಗಳಲ್ಲಿ ಖಾಲಿ ಇವೆ. ಗದಗ, ಧಾರವಾಡ, ಬೆಳಗಾವಿ, ವಿಜಯಪುರ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕ ಹುದ್ದೆ ಖಾಲಿ ಇದೆೆ. ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2ರ 10 ಹುದ್ದೆ, ಮೀನುಗಾರಿಕೆ ಕ್ಷೇತ್ರ ಪಾಲಕ-36 ಹುದ್ದೆ, ಮೀನುಗಾರಿಕೆ ಹಿರಿಯ ಮೇಲ್ವಿಚಾರಕ-1 ಹುದ್ದೆ ಖಾಲಿ ಇದೆ. ಬೆಳಗಾವಿ ವಿಭಾಗಕ್ಕೆ ಉಪನಿರ್ದೆಶಕರಿಲ್ಲದೆ ವರ್ಷಗಳೇ ಕಳೆದಿವೆ. ಬೆಳಗಾವಿಯ ಸಹಾಯಕ ನಿರ್ದೇಶಕರೇ ಈ ಹುದ್ದೆ ನಿಭಾಯಿಸುತ್ತಿದ್ದಾರೆ.

ಅಭಿವೃದ್ಧಿ ಯೋಜನೆಗೆ ಪೆಟ್ಟು: ಮೀನುಗಾರಿಕೆ ಫಲಾನುಭವಿಗಳ ಆಯ್ಕೆ, ರೈತರಿಗೆ ಮೀನುಗಾರಿಕೆ ತರಬೇತಿ, ಮೀನುಗಾರಿಕೆಗೆ ಸರ್ಕಾರಿ ಕೆರೆಗಳನ್ನು ಗುತ್ತಿಗೆ ನೀಡುವುದು ಹಾಗೂ ಹರಾಜು ಹಾಕುವುದು, ಫಲಾನುಭವಿಗಳ ಆಯ್ಕೆ ಮತ್ತು ಅವರಿಗೆ ಸಹಾಯಧನ ನೀಡುವುದು, ಮೀನುಗಾರಿಕೆ ಕಿಟ್ ವಿತರಿಸುವುದು ಜತೆಗೆ ಮೀನುಗಾರಿಕೆ ಕ್ರಿಯಾ ಯೋಜನೆ ರೂಪಿಸುವುದು, ಮೀನು ಮರಿಗಳ ಪೂರೈಕೆ ಸೇರಿ ವಿವಿಧ ಕೆಲಸ ಕಾರ್ಯಗಳಿಗೆ ಅಗತ್ಯ ಸಿಬ್ಬಂದಿ ಇಲ್ಲ.

ಹೀಗಾಗಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲು ಸಾಧ್ಯವಾಗುತ್ತಿಲ್ಲ.
ಕಾರ್ಯಗಳಿಗೆ ಅಡೆತಡೆ: ರಾಜ್ಯದ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 3,906 ಕೆರೆಗಳಿವೆ. ಈ ಕೆರೆಗಳು 40 ಹೆಕ್ಟೇರ್‌ಗಿಂತ ಹೆಚ್ಚು ಅಚ್ಚುಕಟ್ಟು ಹೊಂದಿವೆ.

ಇವುಗಳನ್ನು ವಿವಿಧ ಯೋಜನೆಗಳಲ್ಲಿ ಮೀನುಗಾರಿಕೆಗೆ ಟೆಂಡರ್ ಕರೆಯುವುದು, ಗುತ್ತಿಗೆ ನೀಡುವುದು, ಹರಾಜು ಹಾಕುವುದು ಹಾಗೂ ಸಂಘ-ಸಂಸ್ಥೆಗಳ ಬಳಕೆಗೆ ನೀಡುವುದು ಹಾಗೂ ಮೀನು ಮರಿಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದ ಕಾರ್ಯವನ್ನು ನಿಯಮಾವಳಿಯಂತೆ ಇಲಾಖೆ ಸಿಬ್ಬಂದಿ ಮಾಡಬೇಕು. ಆದರೆ, ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಈ ಕಾರ್ಯಗಳಿಗೆ ಅಡೆತಡೆಯಾಗುತ್ತಿವೆ.

ಗ್ರಾಪಂಗೂ ಸಿಗುತ್ತಿಲ್ಲ ಅಧಿಕಾರಿಗಳ ನಿರ್ದೇಶನ

ರಾಜ್ಯದಲ್ಲಿ 40 ಹೆಕ್ಟೇರ್‌ಗಿಂತ ಕಡಿಮೆ ಅಚ್ಚುಕಟ್ಟು ಹೊಂದಿರುವ 23 ಸಾವಿರ ಕೆರೆಗಳಿವೆ. ಇವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಇವುಗಳ ನಿರ್ವಹಣೆಯ ಅಧಿಕಾರ ಗ್ರಾಪಂಗಳಿಗೆ ಇರುತ್ತದೆ. ಅವರಿಗೆ ಇಲಾಖೆ ಸಹಾಯಕ ನಿರ್ದೇಶಕರು ಸಲಹೆ, ನಿರ್ದೇಶನ ನೀಡುತ್ತಾರೆ. ಆದರೆ, ಗ್ರಾಪಂಗಳಿಗೆ ಮೀನುಗಾರಿಕೆಗೆ ಕೆರೆಗಳ ನಿರ್ವಹಣೆ ಕುರಿತು ಸೂಕ್ತ ಮಾರ್ಗದರ್ಶನ, ನಿರ್ದೇಶನ ಕೊಡಲು ಸಹಾಯಕ ನಿರ್ದೇಶಕರೇ ಇಲ್ಲ. ಎಲ್ಲೆಡೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಯುವ ಸಮೂಹ ನೌಕರಿಗಾಗಿ ಮೊರೆ ಇಡುತ್ತಿದೆ. ಸರ್ಕಾರಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನಾದರೂ ಭರ್ತಿ ಮಾಡಿಕೊಳ್ಳಬೇಡವೇ ಎಂದು ಪ್ರಶ್ನಿಸುತ್ತಾರೆ ಪ್ರಾಜ್ಞರು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲಭ್ಯವಿರುವ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆ ಮಾಡಿ ಖಾಲಿ ಹುದ್ದೆಯ ಕಾರ್ಯಗಳನ್ನು ನಿಭಾಯಿಸುತ್ತಿದ್ದೇವೆ. ಹುದ್ದೆ ಭರ್ತಿಯಾದರೆ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಅನುಕೂಲವಾಗುತ್ತದೆ. | ಪ್ರಭುಲಿಂಗ ಕವಳಿಕಟ್ಟಿ ಮೀನುಗಾರಿಕೆ ಇಲಾಖೆ ನಿರ್ದೇಶಕ, ಬೆಂಗಳೂರು

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net