

ಮೈಸೂರು: ಕೃಷ್ಣರಾಜ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಸರ್ಕಾರ ಹತ್ತು ಹಲವು ಕಾರ್ಯಕ್ರಮ ಮಾಡುತ್ತಿದೆ. ಅವುಗಳನ್ನು ಕೊನೆ ಹಂತದವರೆಗೂ ತೆಗೆದುಕೊಂಡು ಹೋದಾಗ ಮಾತ್ರ ಅದ್ಭುತ ಫಲಿತಾಂಶ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನ ಸಂಘದ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಕೃಷ್ಣರಾಜ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ‘ಮೋದಿ ಯುಗ ಉತ್ಸವ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕೆ.ಆರ್.ಕ್ಷೇತ್ರದಲ್ಲಿ 70 ಸಾವಿರ ಜನರಿಗೆ ಹಲವು ಯೋಜನೆಗಳನ್ನು ತಲುಪಿಸಿರುವುದು ದಾಖಲೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ಕಾರದ ಸೌಲಭ್ಯಗಳು ಮಧ್ಯವರ್ತಿಗಳಿಗೆ ತಲುಪದೇ ನೇರವಾಗಿ ಬಡಜನರ ಸಹಿತ ಅರ್ಹ ಫಲಾನುಭವಿಗಳಿಗೆ ತಲುಪಬೇಕೆಂಬುದು ಪ್ರಧಾನಿಗಳ ಆಶಯವಾಗಿದೆ. ಹೀಗಾಗಿ ‘ಕಿಸಾನ್ ಸಮ್ಮಾನ್ ’ ಪ್ರಧಾನಮಂತ್ರಿ ಅವಾಸ್ ಯೋಜನೆ’ ’ಮುದ್ರಾ ಯೋಜನೆ’ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸಿದ್ದಾರೆ ಎಂದರು.
ಇಂದು ಪ್ರತಿ ಗ್ರಾಮ, ವಾರ್ಡಿನ ಸ್ತ್ರೀ ಸಂಘಕ್ಕೆ 5 ಲಕ್ಷ ರೂ. ನೀಡಲು ಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರ 1.5 ಲಕ್ಷ ರೂ. ನೀಡಲಿದ್ದು, ಉಳಿದಿದ್ದನ್ನು ಬ್ಯಾಂಕ್ ನೀಡಲಿದೆ. 24 ಉತ್ಪನ್ನಗಳನ್ನು ಪಟ್ಟಿ ಮಾಡಿ ತರಬೇತಿ ಮೂಲಕ ಅವುಗಳ ಉತ್ಪಾದನೆ, ಮಾರಾಟದ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಯುವಕರ ಸಂಘಕ್ಕೆ ‘ಸ್ವಾಮಿ ವಿವೇಕಾನಂದ ಯುವ ಶಕ್ತಿ’ ಯೋಜನೆ ಜಾರಿಗೆ ತಂದಿದ್ದು, ಅವರಿಗೂ 5 ಲಕ್ಷ ರೂ. ಸಹಾಯಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮೈಸೂರು ತನ್ನದೇ ಆದ ಪರಂಪರೆ, ಸಂಸ್ಕೃತಿ ಹೊಂದಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಶಿಷ್ಟರ ರಕ್ಷಣೆ, ದುಷ್ಟರ ಸಂಹಾರದ ಸಂಕೇತ ದಸರಾ ಆಗಿದೆ. ಅಂದಿನ ರೀತಿ ಮಹಿಷಾಸುರರು ಇಲ್ಲ. ನಮ್ಮೊಳಗೆ ಸಾಕಷ್ಟು ದುಷ್ಟ ಮಹಿಷಾಸುರರಿದ್ದಾರೆ. ಮತ್ತೊಬ್ಬರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವುದು, ಎಲ್ಲದಕ್ಕೂ ರಿಪೋರ್ಟ್ ಕಾರ್ಡ್ ಕೇಳುತ್ತಾರೆ. ಇವೆಲ್ಲವನ್ನೂ ಜನರು ತೀರ್ಮಾನಿಸಲಿ ಎಂದರು.
ಶಾಸಕ ಎಸ್.ಎ.ರಾಮದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಕಾಲುವೆ ಬಗ್ಗೆ ಎಲ್ಲ ಕಡೆ ದೊಡ್ಡ ಕೂಗು ಇದೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚುವರಿ ನೀರು ಬರುತ್ತಿರುವ ಕ್ಷೇತ್ರಕ್ಕೆ 46 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿರುವ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇವೆ. 4 ಕೋಟಿ ರೂ.ವೆಚ್ಚದಲ್ಲಿ ಗ್ರಂಥಾಲಯ ಅಭಿವೃದ್ಧಿಪಡಿಸಿ ಆರು ತಿಂಗಳಲ್ಲಿ ನಿಮ್ಮಿಂದಲೇ ಉದ್ಘಾಟಿಸುತ್ತೇವೆ. ಡಿವಿಜಿ, ಆಯುರ್ವೇದ ಹೀಗೆ 120 ಹೆಸರಿನಲ್ಲಿ ಉದ್ಯಾನವನ ಗಳ ಅಭಿವೃದ್ಧಿ ಗೆ ಇಂದು ಚಾಲನೆ ದೊರೆತಿದೆ ಎಂದರು.
ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ಉಪ ಮೇಯರ್ ರೂಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮುಡಾ ಆಯುಕ್ತ ಎಚ್.ಎಸ್.ದಿನೇಶ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಜಿಪಂ ಸಿಇಒ ಡಾ.ಆರ್.ಪೂರ್ಣಿಮಾ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಮಾ.ವಿ.ರಾಮಪ್ರಸಾದ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ನಗರಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪ, ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಡಿವೇಲು ಉಪಸ್ಥಿತರಿದ್ದರು.
ದ್ವಿಚಕ್ರ ವಾಹನ ಕೊಡುಗೆ
181.56 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ಹಾಗೂ ರಾಜ್ಯದಲ್ಲೇ ಪ್ರಥಮ ಬಾರಿಗೆ 20 ಪೌರ ಕಾರ್ಮಿಕ ಮಹಿಳೆಯರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ಚಾಲನೆ ನೀಡಿದರು.
ಪೌರ ಕಾರ್ಮಿಕ ಮಹಿಳೆಯರಾದ ಗೀತಾ, ಮೀನಾಕ್ಷಿ, ಲಕ್ಷ್ಮೀ, ಪಲ್ಲವಿ, ಪದ್ಮಾವತಿ, ಸಾವಿತ್ರಿ, ಸರೋನಿ, ಸುಮತಿ, ದೇವಿ, ಚಂದ್ರಮ್ಮ, ಮಂಜುಳಾ, ಕುಮಾರಿ, ಕಮಲಾ, ವಸಂತ, ರೇಖಾ, ಧನಲಕ್ಷ್ಮೀ, ಗೀತಾ, ಜ್ಯೋತಿ, ರಾಧ ಹಾಗೂ ಬೇಬಿ ಅವರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ವಿತರಿಸಲಾಯಿತು.
ರಾಜಕಾರಣದಲ್ಲಿ ಸಾಕಷ್ಟು ಟೀಕೆಗಳನ್ನು ಸಾಕಷ್ಟು ಸಹಿಸಿಕೊಂಡಿದ್ದೇನೆ. ಟೀಕೆಗಳೇ ನನಗೆ ಟಾನಿಕ್.ಟೀಕೆಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಮುನ್ನಡೆಯುತ್ತೇನೆ. ನಾನು ಯಾವುದಕ್ಕೂ ಅಂಜುವುದಿಲ್ಲ. ಇದೆಲ್ಲ ಹೇಡಿಗಳು ಮಾಡುವ ಕೆಲಸ ಆಗಿದೆ. ವಿಧಾನಸಭೆ ವೇದಿಕೆಯಲ್ಲಿ ಮಾತನಾಡದೇ ಗೋಡೆ ಮೇಲೆ ಪತ್ರ ಅಂಟಿಸುವುದು ಶೂರತನವೇ?ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.