

ಬೆಳಗಾವಿ: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ರಸ್ತೆ, ಒಳಚರಂಡಿ ಹಾಗೂ ಇನ್ನಿತರ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ವಾರದೊಳಗೆ ಪರಿಹರಿಸಬೇಕು. ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷೃ ವಹಿಸಿದರೆ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ಮಾರ್ಟ್ ಸಿಟಿ, ಪಾಲಿಕೆ, ಅರಣ್ಯ ಇಲಾಖೆ, ಬಿಎಸ್‌ಎನ್‌ಎಲ್, ಜಲಮಂಡಳಿ, ಹೆಸ್ಕಾಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಣ್ಣ ಪುಟ್ಟ ಸಮಸ್ಯೆ ಮುಂದಿಟ್ಟುಕೊಂಡು ಕಾಮಗಾರಿ ವಿಳಂಬ ಮಾಡುವುದು ಸರಿ ಅಲ್ಲ. ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಈಗಾಗಲೇ ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ರಸ್ತೆ ಕಾಮಗಾರಿಗಳು ಮುಗಿಯುವ ಮುನ್ನವೇ ಒಳಚರಂಡಿ ಮಾರ್ಗ, ಕುಡಿಯುವ ನೀರಿನ ಪೈಪ್‌ಲೈನ್, ಗ್ಯಾಸ್ ಪೈಪ್‌ಲೈನ್ ಹಾಗೂ ಹೆಸ್ಕಾಂ ಕಾಮಗಾರಿಗಳು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ರಸ್ತೆ ಅಗೆಯುವಂತಿಲ್ಲ: ಮನೆ, ಅಂಗಡಿಗಳಿಗೆ ಕುಡಿಯುವ ನೀರು, ಒಳಚರಂಡಿ, ಗ್ಯಾಸ್, ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಮುಗಿದ ಬಳಿಕ ರಸ್ತೆ ಅಗೆಯಲು ಅವಕಾಶ ನೀಡುವುದಿಲ್ಲ. ಹಲವು ತಿಂಗಳಿಂದ ಎಸ್‌ಬಿಎಂ ರಸ್ತೆಯಲ್ಲಿ ಅರಣ್ಯ ಇಲಾಖೆಯವರು ಮರ ತೆರವುಗೊಳಿಸದಿರುವ ಹಿನ್ನೆಲೆಯಲ್ಲಿ ಎಲ್ಲ ಕಾಮಗಾರಿಗಳು ಅರ್ಧದಲ್ಲಿಯೇ ಮೊಟಕುಗೊಂಡಿವೆ. ಹಾಗಾಗಿ ಹೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಗಳ ಬಳಿಕ ರಸ್ತೆ ಅಗೆದು ಸಂಪರ್ಕ ಕೊಡುವ ಯೋಚನೆಯಲ್ಲಿದ್ದರೆ ಅದನ್ನು ತೆಗೆದು ಹಾಕಿ. ಒಮ್ಮೆ ಕಾಮಗಾರಿ ಮುಗಿದರೆ ಆ ರಸ್ತೆಯನ್ನು ಯಾವುದೇ ಕಾರಣಕ್ಕೂ ಅಗೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ನಗರದ ವಿವಿಧ ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪ್ರಾರಂಭಗೂಂಡಿರುವ ರಸ್ತೆ, ಚರಂಡಿ, ಒಳಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆ, ಯುಜಿ ಕೇಬಲ್ ಅಳವಡಿಕೆ, ಲೈಟ್ಸ್, ವಾಟರ್ ಪೈಪ್‌ಲೈನ್ ಕಾಮಗಾರಿಗಳನ್ನು ವಾರದಲ್ಲಿ ಪುನರಾರಂಭಿಸಬೇಕು. ಪಾಲಿಕೆಯ ಅನುದಾನದಡಿ ಟೆಂಡರ್ ಪ್ರಕ್ರಿಯೆ ಮುಗಿದ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ, ಜಲಮಂಡಳಿ, ಅರಣ್ಯ ಇಲಾಖೆ, ಬಿಎಸ್‌ಎನ್‌ಎಲ್, ಹೆಸ್ಕಾಂ ಅಧಿಕಾರಿಗಳು ಇದ್ದರು.