

ರವಿ ಗೋಸಾವಿ ಬೆಳಗಾವಿ
ಕನ್ನಡ-ಮರಾಠಿ ಭಾಷಿಕರ ನಡುವಿನ ಗಲಾಟೆ-ವಿವಾದಗಳಿಂದಲೇ ಸದ್ದು ಮಾಡುವ ಗಡಿ ಜಿಲ್ಲೆ ಬೆಳಗಾವಿಯು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುವ ಜಿಲ್ಲೆಗಳಲ್ಲಿಯೂ ಒಂದು. ಇಲ್ಲಿನ ವಿಪತ್ತು ನಿರ್ವಹಣೆ ಸಮಸ್ಯೆ ಪ್ರತಿ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿ ಕಾಡುತ್ತದೆ. ಆದರೆ, ಈ ಬಾರಿ ಇನ್ನೂ ಹತ್ತಾರು ಹೊಸ ಸಮಸ್ಯೆಗಳು ಉಲ್ಬಣಗೊಂಡಿದ್ದು, ಮಳೆಗಾಲ ಆರಂಭದ ಹೊಸ್ತಿಲಲ್ಲೇ ನೂತನ ಸಚಿವದ್ವಯರಿಗೆ ಜಿಲ್ಲೆಯಲ್ಲಿ ಸವಾಲುಗಳ ಸಾಗರವೇ ಎದುರಾಗಿದೆ.
ವರ್ಷಗಳುರುಳಿದರೂ ನೆರೆ ಸಂತ್ರಸ್ತರಿಗೆ ಪರಿಹಾರ ಕೈಗೆಟುಕದಿರುವುದು, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿತ, ಇಲಾಖೆಗಳಲ್ಲಿನ ಪರ್ಸಂಟೇಜ್ ಹಾವಳಿ ಹಾಗೂ ಈಗಾಗಲೇ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದರ ಜತೆಯಲ್ಲೇ ಹದಗೆಟ್ಟು ಹಳಿತಪ್ಪಿರುವ ಗ್ರಾಮೀಣ ರಸ್ತೆ-ಸಾರಿಗೆ ಸಂಪರ್ಕವನ್ನು ಸರಿದಾರಿಗೆ ತಂದು ಮುಂಗಾರಿನ ಕೃಷಿಗೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಸುವುದು ಸಚಿವರಿಗೆ ಸವಾಲಾಗಿ ಪರಿಣಮಿಸಿದೆ.
ಈ ನಡುವೆಯೇ ಲೋಕೋಪಯೋಗಿ ಇಲಾಖೆಯ ನೂತನ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸುರ್ವಣಸೌಧದಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಸಭೆ ಕರೆಯಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೂ ಪಾಲ್ಗೊಳ್ಳುತ್ತಿರುವುದು ಜನರ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ, ಕಳೆದ ಹಲವು ತಿಂಗಳಿನಿಂದ ಚುನಾವಣೆ ಹಿನ್ನೆಲೆಯಲ್ಲಿ ಜಿಡ್ಡುಗಟ್ಟಿ ನಿಂತಿದ್ದ ಸೌಲಭ್ಯ ವಿತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನು ವೇಗ ದೊರೆಯಲಿದೆ ಎಂದು ಜಿಲ್ಲೆಯ ಜನ ಎದುರು ನೋಡುತ್ತಿದ್ದಾರೆ.
ಈ ಕುರಿತು ಶಾಸಕರೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವಲ್ಲಿ ತಾಪಂ ಹಾಗೂ ಜಿಪಂ ಸದಸ್ಯರಿಲ್ಲದಿರುವುದು ಅಧಿಕಾರಿಗಳ ಪರ್ಸಂಟೇಜ್ ಹಾವಳಿ ಹೆಚ್ಚಾಗಿತ್ತು. ಇದು ಪರೋಕ್ಷವಾಗಿ ಕಾಮಗಾರಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಿತ್ತು. ಈಗಲೂ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಲ್ಲ. ಆದರೆ, ಅಖಂಡ ಜಿಲ್ಲೆಯ ಎಲ್ಲ ಶಾಸಕರೂ ಒಗ್ಗಟ್ಟಿನಿಂದ ಆಡಳಿತವರ್ಗಕ್ಕೆ ಚುರುಕು ಮುಟ್ಟಿಸಿ, ಜಿಲ್ಲೆಯ ಜನರ ನಿರೀಕ್ಷೆ ಇಡೇರಿಸುತ್ತೇವೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆಗುಂದಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಇದೀಗ ಮರುಜೀವ ನೀಡಬಹುದೆನ್ನುವ ಕನಸು ಚಿಗುರೊಡೆದಿದೆ. ದಿನೇ ದಿನೆ ಬೆಳೆಯುತ್ತಿರುವ ಬೆಳಗಾವಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್ ಜಾಗ ತೆರವುಗೊಳಿಸಿ ಮಾರುಕಟ್ಟೆ ಪ್ರದೇಶದಲ್ಲಿ ಬೃಹತ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಹಾಗೂ ಇನ್ನೂ ಕನಿಷ್ಠ ನಾಲ್ಕು ರೈಲ್ವೆ ಮೇಲ್ಸೇತುವೆ ಹಾಗೂ ನಗರದ ಹೊರವಲಯದಲ್ಲಿ ರಿಂಗ್ ರೋಡ್ ನಿರ್ಮಾಣದ ಜತೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾರದರ್ಶಕತೆ ಕಾಪಾಡುವುದು ಕುಂದಾನಗರಿಗೆ ಅಗತ್ಯವಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳ ಬಲವರ್ಧನೆ, ನೂತನ ತಾಲೂಕುಗಳಿಗೆ ಮೂಲಸೌಕರ್ಯ, ನೀರಾವರಿ ಸೌಲಭ್ಯ ಹೆಚ್ಚಿಸುವುದರ ಜತೆಗೆ ಕ್ಷೇತ್ರ ವೃದ್ಧಿಯಾಗಬೇಕಿದೆ. ಇನ್ನು ಸತೀಶ ಜಾರಕಿಹೊಳಿಗೆ ಲೋಕೋಪಯೋಗಿ ಇಲಾಖೆ ಖಾತೆ ಧಕ್ಕಿರುವುದು ಸುವರ್ಣಸೌಧಕ್ಕೆ ಹಲವು ಇಲಾಖೆಗಳ ರಾಜ್ಯ ಮಟ್ಟದ ಕಚೇರಿ ಸ್ಥಳಾಂತರ ಮಾಡಿ, ಬೆಳಗಾವಿಗೆ ಬಲ ತುಂಬಲಿದ್ದಾರೆ ಎಂಬ ನಿರೀಕ್ಷೆ ಜನರಿಲ್ಲಿದೆ.
ನಮಗೆ ಆಹ್ವಾನವೇ ಬಂದಿಲ್ಲ..!
ನೂತನ ಸಚಿವರ ನೇತೃತ್ವದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಭೆಗೆ ಆಡಳಿತ ಪಕ್ಷದ ಕೆಲವು ಶಾಸಕರನ್ನು ಆಹ್ವಾನಿಸದಿರುವುದು ನೂತನ ಹಾಗೂ ಹಿರಿಯ ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ. ಸೋಮವಾರ ಸಂಜೆವರೆಗೂ ಬಹುತೇಕ ಶಾಸಕರಿಗೆ ಸುವರ್ಣಸೌಧದಲ್ಲಿ ಮಂಗಳವಾರ ಸಭೆ ಆಯೋಜಿಸಿರುವ ಮಾಹಿತಿಯೇ ಇರಲಿಲ್ಲ.
ಸುವರ್ಣಸೌಧದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಸಭೆ ಆಯೋಜಿಸಿರುವ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಸಚಿವರಾಗಲಿ, ಜಿಲ್ಲಾಡಳಿತದಿಂದಾಗಲಿ ಯಾವುದೇ ಆಹ್ವಾನ ಬಂದಿಲ್ಲ. ಮಹಾಂತೇಶ ಕೌಜಲಗಿ, ಬೈಲಹೊಂಗಲ ಶಾಸಕ
ಮಹಾಂತೇಶ ಕೌಜಲಗಿ, ಬೈಲಹೊಂಗಲ ಶಾಸಕ
ಸಚಿವರಾದ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸುವರ್ಣಸೌಧದ ಮೂರನೇ ಮಹಡಿಯ ಕೊಠಡಿ 354ರಲ್ಲಿ ಮಂಗಳವಾರ ಸಭೆ ಕರೆಯಲಾಗಿದೆ. ಸಭೆಗೆ ಜಿಲ್ಲೆಯ ಎಲ್ಲ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರನ್ನು ಆಹ್ವಾನಿಸಲಾಗಿದೆ. ನಿತೇಶ ಪಾಟೀಲ, ಜಿಲ್ಲಾಧಿಕಾರಿ, ಬೆಳಗಾವಿ
ನಿತೇಶ ಪಾಟೀಲ, ಜಿಲ್ಲಾಧಿಕಾರಿ, ಬೆಳಗಾವಿ