

ಹಗರಿಬೊಮ್ಮಹಳ್ಳಿ; ಈಗಾಗಲೇ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಗ್ರಾಮಗಳಿಗೂ ಫೆಬ್ರವರಿಯಲ್ಲಿ ತಲಾ 50ಲಕ್ಷ ರೂ. ಅನುದಾನ ನೀಡುವ ಮೂಲಕ, ಅಗತ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಇದನ್ನೂ ಓದಿ:ವೃದ್ಧಾಶ್ರಮಕ್ಕೆ ವಿಶೇಷ ಅನುದಾನ ತರಲು ಯತ್ನ
ಪಟ್ಟಣದ ಗಂಗಾವತಿ ಭೀಮಪ್ಪನವರ ಸಪಪೂ ಕಾಲೇಜಿನ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರವನ್ನು ನಿರ್ಲಕ್ಷಿಸಿದವರಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡುತ್ತೇನೆ. ಇಂದು ದೇಶ ಸುಭಿಕ್ಷೆಯಿಂದ ಕೂಡಿದೆ. ಇದಕ್ಕೆ 144ವರ್ಷಗಳ ನಂತರ ನಡೆದ ಮಹಾ ಕುಂಭಮೇಳ ಸಾಕ್ಷಿಯಾಗಿದೆ. ಇಂಥ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಸಮಸ್ಯೆಗಳು ತಲೆ ದೂರದೆ. ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತಾಯಿತು. ಸಂವಿಧಾನದ ಆಶಯಗಳನ್ನು ರಕ್ಷಿಸಬೇಕು. ಗಡಿ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತರಿಗೆ ಶಕ್ತಿ ತುಂಬಿ, ಬಡತನ ನಿರ್ಮೂಲನೆ ಮಾಡಬೇಕು ಎಂದರು.
ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಅನೇಕ ಮಹಾನೀಯರು ಹೋರಾಡಿದ್ದಾರೆ. ಭಾರತ ಸಂವಿಧಾನ ಪ್ರಪಂಚದಲ್ಲಿ ಅತಿದೊಡ್ಡ ಸಂವಿಧಾನವಾಗಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ವೇದವಾಕ್ಯದೊಂದಿಗೆ ರಾಷ್ಟ್ರಕ್ಕೆ ಸಮರ್ಪಣೆಗೊಂಡಿತು ಎಂದರು. ಇದಕ್ಕು ಮುಂಚೆ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಪಟ್ಟಣದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪುರಸಭೆ ಅಧ್ಯಕ್ಷ ಮರಿ ರಾಮಪ್ಪ, ಸದಸ್ಯ ದೀಪಕ್ ಕಠಾರೆ, ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಸಿಒ ಪ್ರಭಾಕರ್ ಪಾಟೀಲ್, ಬಿಇಒ ಮೈಲೇಶ್ ಬೇವೂರು, ಪಿಎಸ್‌ಐ ಬಸವರಾಜ್ ಅಡವಿಬಾವಿ, ಟಿಎಚ್‌ಒ ಪ್ರವೀಣ್, ತೋಟಗಾರಿಕೆ ಇಲಾಖೆಯ ರಾಜೇಂದ್ರ, ಕೃಷಿ ಇಲಾಖೆ ಅಧಿಕಾರಿ ಸುನಿಲ್ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ್, ತಾಪಂ ಇಒ ಪರಮೇಶ್ವರಪ್ಪ, ಪ್ರಮುಖರಾದ ವೈ.ಮಲ್ಲಿಕಾರ್ಜುನ, ಬಿಜಿ ಬಡಿಗೇರ್, ಚಿತ್ತವಾಡಗಿ ಪ್ರಕಾಶ್, ಬಡಿಗೇರ್ ಬಸವರಾಜ್, ಹೋಟೆಲ್ ಸಿದ್ದಪ್ಪ, ಸರ್ದಾರ್ ಯಮನೂರು, ಕೃಷ್ಣಮೂರ್ತಿ ಶೆಟ್ಟಿ, ಡಾ.ಸೂರಪ್ಪ ಇತರರಿದ್ದರು.