

ಮೈಸೂರು: ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದರ ಮೂಲಕ ನಾಯಕತ್ವದ ಗುಣವನ್ನು ಉತ್ತಮಪಡಿಸಬಹುದು ಎಂದು ಶಿಕ್ಷಣ ತಜ್ಞ ವಿಜಯನರಸಿಂಹಂ ಹೇಳಿದರು.
ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ಮುಖಂಡರಿಗೆ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಆತ್ಮವಿಶ್ವಾಸ ಕಡಿಮೆ ಆಗುತ್ತಿದೆ. ಹಾಗಾಗಿ ಆತ್ಮವಿಶ್ವಾಸ ಬೆಳೆಸಿಕೊಂಡರೆ ಮುಂದೆ ನಾಯತಕ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ ಆಗುತ್ತದೆ. ಶೈಕ್ಷಣಿಕ ಚಟುವಟಿಕೆ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ಗೋಪಾಲಸ್ವಾಮಿ ಮಾತನಾಡಿ, ವಿನಯವೇ ವಿದ್ಯೆಗೆ ಭೂಷಣ. ವಿದ್ಯಾರ್ಥಿಗಳು ಗುಣ, ಶ್ರಮ ಮತ್ತು ಉತ್ತಮ ನಡೆಯಿಂದ ಮಾತ್ರ ಭವಿಷ್ಯ ಉತ್ತಮಪಡಿಸಿಕೊಳ್ಳಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ದೇಶಭಕ್ತಿ ಗೀತೆ ಹಾಗೂ ಬ್ಯಾಂಡ್ ವೃಂದದಿಂದ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹರ್ಷಿ ವಿದ್ಯಾಸಂಸ್ಥೆಯ ಸಂಯೋಜಕ ತೇಜಸ್ ಬಿ.ಶಂಕರ್, ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎ.ಕುಮಾರ್, ಸಮನ್ವಯಾಧಿಕಾರಿ ಬಿ.ಎನ್.ಅನಿತಾ ಇತರರು ಇದ್ದರು.