ಜೂ.12 ರಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

Developed Agricultural Commitment Campaign from June 12
Published on

ಬಾಗಲಕೋಟೆ : ಭಾರತ ಸರ್ಕಾರದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ 2025ನೇ ಸಾಲಿನ ಪೂರ್ವ ಮುಂಗಾರಿನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವೆಂಬ ರೈತ ಕಾರ್ಯಕ್ರಮವನ್ನು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು, ಜಿಲ್ಲಾ ಕೃಷಿ, ತೋಟಗಾರಿಕೆ, ಮತ್ತು ಸಂಬಂಧಿತ ಇಲಾಖೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಈ ಅಭಿಯಾನವು ಬಾಗಲಕೋಟೆ ಜಿಲ್ಲೆಯ 6 ತಾಲೂಕಿನಲ್ಲಿ ಮೇ 29 ರಿಂದ ಜೂನ್ 12 ರ ವರೆಗೆ ನಡೆಯಲಿದ್ದು, ಅಭಿಯಾನದಲ್ಲಿ ಸರ್ಕಾರವು ದೇಶದ ಸುಮಾರು 700 ಜಿಲ್ಲೆಗಳಲ್ಲಿನ 1.5 ರಿಂದ 2 ಕೋಟಿ ರೈತರನ್ನು ತಲುಪಿ ಅವರಿಗೆ ಕೃಷಿಯಲ್ಲಿ ಅವಶ್ಯಕ ಮಾಹಿತಿ ನೀಡುವುದರ ಜೊತೆಗೆ ನೇರ ಸಂವಾದ ನಡೆಸಲು ಸಿದ್ಧತೆ ನಡೆಸಿದೆ.

ಅಭಿಯಾನದ ಉದ್ದೇಶದಂತೆ ಬಾಗಲಕೋಟೆ ಜಿಲ್ಲೆಯಲ್ಲಿ 15 ದಿನಗಳಲ್ಲಿ ವಿವಿಧ ತಾಲೂಕಿನ ಹಳ್ಳಿಗಳಲ್ಲಿ ಅಂದಾಜು 17,000 ರೈತರನ್ನು ಸಂಪರ್ಕಿಸಿ ಅವರಿಗೆ ಕೃಷಿಯಲ್ಲಿ ನವೀನ ತಂತ್ರಜ್ಞಾನಗಳ ಪರಿಚಯ, ಮಣ್ಣು ಮತ್ತು ನೀರು ಪರೀಕ್ಷೆಯ ಮಹತ್ವ, ಸಮಗ್ರ ಕೃಷಿ ಮತ್ತು ಬೆಳೆಗಳ ಸಮಗ್ರ ನಿರ್ವಹಣೆ, ಜಾನುವಾರುಗಳ ನಿರ್ವಹಣೆ, ತೋಟಗಾರಿಕೆ ಬೆಳೆಗಳ ನಿರ್ವಹಣೆ, ಹವಾಮಾನ ಮಾಹಿತಿ ಹಾಗೂ ಇನ್ನಿತರ ಕೃಷಿ ಚಟುವಟಿಕೆಗಳ ಬಗ್ಗೆ ಕೇಂದ್ರದ ವಿಷಯ ತಜ್ಞರು, ಐ.ಸಿ.ಎ. ಆರ್ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಮಾಹಿತಿ ಒದಗಿಸಲಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ಮುಖ್ಯಸ್ಥ ಡಾ. ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net