

ಚನ್ನರಾಯಪಟ್ಟಣ: ಚಿಕ್ಕ ವಯಸ್ಸಿನಿಂದಲೇ ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಈ ಉದ್ದೇಶದಿಂದಲೇ ಮಕ್ಕಳನ್ನು ವಿಜ್ಞಾನದೆಡೆಗೆ ಆಕರ್ಷಿಸುವ ಸಲುವಾಗಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ನಾಗೇಶ್ ಎಜುಕೇಷನ್ ಟ್ರಸ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಭಾರತಿ ನಾಗೇಶ್ ತಿಳಿಸಿದರು.
ಪಟ್ಟಣದ ನಾಗೇಶ್ ಎಜುಕೇಷನ್ ಟ್ರಸ್ಟ್, ಜ್ಞಾನಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಜ್ಞಾನಸಾಗರ ಪಿಯು ಕಾಲೇಜು ವತಿಯಿಂದ ಜ್ಞಾನಸಾಗರ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಸೈನ್ಸ್ ಎಕ್ಸ್‌ಪೋ-2024ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಮೂಢನಂಬಿಕೆ, ಕಂದಾಚಾರದಿಂದ ದೂರವಿದ್ದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಕಲಿಕೆಯ ಹಂತದಲ್ಲೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ರಾಷ್ಟ್ರಕವಿ ಕುವೆಂಪು ಅವರ ಹೇಳಿರುವ ವಿಜ್ಞಾನದ ದೀವಿಗೆ ಹಚ್ಚುವುದು ಬಹಳ ಮುಖ್ಯ. ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿವಿಧ ಕಲ್ಪನೆಯೊಂದಿಗೆ ಮಕ್ಕಳು ರೋಬಾಟ್, ಹೈಡ್ರೋ ಪವರ್ ಜನರೇಟರ್, ಸೆನ್ಸರ್ ಕಸದಬುಟ್ಟಿ ಸೇರಿದಂತೆ ಹತ್ತಾರು ಮಾದರಿಗಳನ್ನು ರೂಪಿಸಿದ್ದಾರೆ. ಈ ಮಾದರಿಗಳು ಬರೀ ಪ್ರದರ್ಶನಕ್ಕಷ್ಟೆ ಸೀಮಿತವಾಗದೆ, ಸಮಾಜದ ಉಪಯೋಗಕ್ಕೆ ಸಹಕಾರಿಯಾಗಬಲ್ಲವು ಎಂಬುದನ್ನು ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಡೀನ್ ಡಾ.ಸುಜಾ ಫಿಲಿಪ್ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗಿದೆ. 250 ವಿದ್ಯಾರ್ಥಿಗಳು 125 ಬಗೆಯ ವಿವಿಧ ಮಾದರಿಗಳನ್ನು ತಯಾರಿಸಿದ್ದು, ಸಮಾಜದ ಬಳಕೆಗೆ ಉಪಯೋಗವಾಗಬಲ್ಲವು ಎಂಬುದನ್ನು ತೋರಿಸಿದ್ದಾರೆ ಎಂದು ಶ್ಲಾಘಿಸಿದರು.
ವಿಜೇತರು:
6 ಮತ್ತು 7 ನೇ ತರಗತಿ ವಿಭಾಗದಲ್ಲಿ ಎಲೆಕ್ಟ್ರೋ ಮ್ಯಾಗ್ನೇಟ್ ಮಾದರಿಗೆ ಹಿತೇಶ ಆರ್. ಪ್ರಥಮ ಸ್ಥಾನ, ಎಲೆಕ್ಟ್ರಿಕ್ ಲಿಫ್ಟ್ ಮಾದರಿಗೆ ಅದ್ವಿತ್ ಬಿ. ದ್ವಿತೀಯ ಸ್ಥಾನ, ಚಂದ್ರಯಾನ-3 ಮಾದರಿಗೆ ವೈಷ್ಣವಿ ಮತ್ತು ಸನ್ನಿಧಿ ತೃತೀಯ ಸ್ಥಾನ ಪಡೆದರು. 8 ಮತ್ತು 9ನೇ ತರಗತಿ ವಿಭಾಗದಲ್ಲಿ ಹೈಡ್ರಾಲಿಕ್ ಕ್ರೇನ್ ಮಾದರಿಗೆ ಜಯಂತ್ ಮತ್ತು ದಕ್ಷಯ್ ಪ್ರಥಮ, ಹೈಡ್ರೋ ಪವರ್ ಪ್ಲಾಂಟ್ ಮಾದರಿಗೆ ನೇಹ ಮತ್ತು ಇಂಪನಾ ದ್ವಿತೀಯ ಸ್ಥಾನ, ಸ್ಮಾರ್ಟ್ ಡಸ್ಟ್ ಬಿನ್ ಮಾದರಿಗೆ ಹರಿಚರಣ್ ಎಚ್.ಎಂ. ಮತ್ತು ಯಶ್ವಿನ್ ತೃತೀಯ ಸ್ಥಾನ ಗಳಿಸಿದರು. ಕಾಲೇಜು ವಿಭಾಗದಲ್ಲಿ ಸ್ಮಾರ್ಟ್ ಹೆಲ್ಮೆಟ್ ಮಾದರಿಗೆ ನಿತೀಶ್, ಅಬ್ದುಲ್ ಮತೀನ್, ನಿಶ್ಚಲ್ ಬಹುಮಾನ ಪಡೆದುಕೊಂಡರು.
ತೀರ್ಪುಗಾರರಾಗಿ ಅಭಿಜಿತ್, ಡಿಂಪಲ್, ಪ್ರವೀಣ್ ಕಾರ್ಯನಿರ್ವಹಿಸಿದರು. ಪಾಲಕರು ವಸ್ತುಪ್ರದರ್ಶನ ವೀಕ್ಷಿಸಿ ಮಕ್ಕಳ ಪ್ರತಿಭೆ, ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.