

ಚಿಕ್ಕಮಗಳೂರು: ಆಧುನಿಕ ಕಾಲಘಟ್ಟದಲ್ಲಿ ಮಲೆನಾಡಿನ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮಲೆನಾಡಿನ ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಹಬ್ಬ ಪ್ರೇರಣೆಯಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ಅಭಿಪ್ರಾಯಪಟ್ಟರು.
ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಮಲೆನಾಡು ಸಮಾನ ಮನಸ್ಕ ಮಹಿಳೆಯರ ಒಕ್ಕೂಟದಿಂದ ಭಾನುವಾರ ಆಯೋಜಿಸಿದ್ದ ಮಲೆನಾಡ ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜಗತ್ತಿಗೆ ಮಾರುಹೋಗಿರುವ ನಾವು ನಮ್ಮ ಸಂಸ್ಕೃತಿ, ಸಂಪ್ರದಾಯ ಮರೆಯುತ್ತಿದ್ದೇವೆ. ನಮ್ಮ ತಲೆಮಾರುಗಳಿಂದ ಬಂದಿರುವ ಸಂಪ್ರದಾಯ, ಸಂಸ್ಕೃತಿ ಉಳಿಸಬೇಕು ಎಂದರು.
ಮೂಡಿಗೆರೆ ವಿಭಿನ್ನ ಸಂಸ್ಕೃತಿ, ಸಂಪ್ರದಾಯವನ್ನು ಹೊಂದಿದೆ. ಬೇರೆ ಬೇರೆ ಸಮುದಾಯದವರು ಇಲ್ಲಿ ನೆಲೆ ಯೂರಿದ್ದು ಸಂಸ್ಕೃತಿ, ಸಂಪ್ರದಾಯಗಳ ಜತೆ ಮಲೆನಾಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳು, ಹಬ್ಬ ಮನೆಗಳಿಗೆ ಸೀಮಿತವಾಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಬೆಳೆಸಬೇಕಿದೆ. ಈ ಹಿನ್ನೆಲೆಯಲ್ಲಿ ಇಂಥ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದು ತಿಳಿಸಿದರು.
ಹೊರ ರಾಜ್ಯಗಳಲ್ಲೂ ಮಲೆನಾಡಿನ ತಿಂಡಿ ತಿನಿಸುಗಳನ್ನು ಇಷ್ಟಪಡುತ್ತಾರೆ. ಅವುಗಳನ್ನು ಹೊರ ಜಗತ್ತಿಗೆ ಪರಿಯಯಿಸುವ ಅಗತ್ಯವೂ ಇದೆ ಎಂದರು.
ಮೋಟಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಮಲೆನಾಡು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಹಬ್ಬವನ್ನು ಪ್ರಾಂಭಿಸಿದರು. ಆದರೆ 2000 ಇಸವಿಯಲ್ಲಿ ಸ್ಥಗಿತಗೊಂಡಿತು. ಅವರು ಮತ್ತೆ ಎಲ್ಲ ಮಹಿಳೆಯರನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಸವಿತಾ ರಮೇಶ್ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಾದ ರಕ್ಷಿತಾ ರಾಜು, ಅನುಪಮಾ ವಿಶ್ವಾಮಿತ್ರ, ಲಕ್ಷ್ಮೀದೇವಮ್ಮ, ದೇವನಾ ರವಿ, ವೀಣಾ ಡಿ.ಬಿ.ಚಂದ್ರೇಗೌಡ, ಡಾ. ಮಾನಸಾ ಅವರನ್ನು ಸನ್ಮಾನಿಸಲಾಯಿತು.
ದಿಕ್ಷೀತ್ ಗೌಡ ಮತ್ತು ಶ್ರುತಿ ಗೌಡ ಅವರ ಕಲ್ಪಿತ ವಿವಾಹ ಮಹೋತ್ಸವ ಮಲೆನಾಡಿನ ಸಂಪ್ರದಾಯದಂತೆ ನಡೆಯಿತು. ಸುಗ್ಗಿಕಾಲದ ಬಣವೆ ಪೂಜೆ ನೆರವೇರಿಸಲಾಯಿತು. ಮಲೆನಾಡು ಸಂಪ್ರದಾಯದ ಜಾನಪದ ನೃತ್ಯ, ಜಾನಪದ ಗೀತೆ, ಕೋಲಾಟ ಸ್ಪರ್ಧೆ, ಕಂಸಾಳೆ, ನೃತ್ಯರೂಪಕ, ಜಾನಪದ ಶೈಲಿಯ ರ‌್ಯಾಂಪ್ ವಾಕ್ ನಡೆಯಿತು. ಮಲೆನಾಡು ತಿಂಡಿ ತಿನಿಸುಗಳ ಪ್ರದರ್ಶನ ಗಮನ ಸೆಳೆದವು. ವೇದಿಕೆಯನ್ನು ಮಲೆನಾಡು ಸಂಪ್ರದಾಯ, ಸಂಸ್ಕೃತಿಯಂತೆ ಅಲಂಕರಿಸಲಾಗಿತ್ತು.
ಚಲನಚಿತ್ರ ನಿರ್ದೇಶಕ ನಿನಾಸಂ ಗಣೇಶ್, ಧಾರಾವಾಹಿ ನಟಿ ಶರ್ಮಿತಾ ಗೌಡ, ಒಕ್ಕೂಟದ ಜಯಮ್ಮ, ಸೀತಮ್ಮ, ಜಮುನಾ ಇತರರಿದ್ದರು.