ಓದುವ ಹವ್ಯಾಸ ಮೈಗೂಡಿಸಿಕೊಳ್ಳಿರಿ

ಓದುವ ಹವ್ಯಾಸ ಮೈಗೂಡಿಸಿಕೊಳ್ಳಿರಿ
Published on

ತಿ.ನರಸೀಪುರ: ವಿದ್ಯಾರ್ಥಿಗಳು ಟಿ.ವಿ, ಮೊಬೈಲ್ ನಿಂದ ದೂರವಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ ಕಿವಿಮಾತು ಹೇಳಿದರು.

ತಾಲೂಕಿನ ಸೋಸಲೆ ಗ್ರಾಮದ ಬಳಿಯಿರುವ ಜ್ಞಾನೋದಯ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಾಲಕರು ಪರೀಕ್ಷಾ ಸಮಯದಲ್ಲಿ ಮನೆಯಲ್ಲಿ ಧಾರಾವಾಹಿಗಳನ್ನು ನೋಡಲು ಟಿ.ವಿ ಹಾಕಬಾರದು. ವಿದ್ಯಾರ್ಥಿಗಳ ಸಾಧನೆಗೆ ಪೂರಕವಾದ ಪರಿಸರವನ್ನು ನಿರ್ಮಾಣ ಮಾಡಿಕೊಡಬೇಕು. ಖಾಸಗಿ ಶಾಲೆಯವರು ಎಲ್ಲವನ್ನು ಕಲಿಸುತ್ತಾರೆ ಎಂಬ ಮನೋಭಾವ ಬಿಡಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ಪಾಲಕರು ಶಾಲೆಗೆ ಆಗಾಗ್ಗೆ ಭೇಟಿ ನೀಡಿ, ನಿಮ್ಮ ಮಕ್ಕಳ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬೇಕು. ಮಕ್ಕಳಲ್ಲಿನ ಕಲಿಕೆಯ ಮಟ್ಟದ ಬಗ್ಗೆಯೂ ತಿಳಿಯುವ ಪ್ರಯತ್ನ ಮಾಡಬೇಕು. ಶೈಕ್ಷಣಿಕ ವರ್ಸಾಂತ್ಯದಲ್ಲಿ ಆಯೋಜನೆಗೊಳ್ಳುವ ಈ ಶಾಲಾ ವಾರ್ಷಿಕೋತ್ಸವದಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣವಾಗುತ್ತದೆ ಎಂದು ಎಸ್.ಸಿ.ಶಿವಮೂರ್ತಿ ಹೇಳಿದರು.

ಜಿಲ್ಲಾ ಆಸ್ಪತ್ರೆಯ ನಸಿರ್ಂಗ್ ಅಧೀಕ್ಷಕಿ ಕೆ.ಸೆಲಿನಾ ಮಾತನಾಡಿ, ಜ್ಞಾನೋದಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾದ ಶಿಕ್ಷಣ ನೀಡುತ್ತಿದೆ. ನಸಿರ್ಂಗ್ ಕೆಲಸ ಪವಿತ್ರವಾದ ಕೆಲಸವಾಗಿದ್ದು, ಸೇವಾ ಮನೋಭಾವದಿಂದ ಮಾಡಬೇಕು. ವ್ಯಾಸಂಗದ ಅವಧಿಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮವಾದ ಜ್ಞಾನ ಬೆಳೆಸಿಕೊಂಡರೆ ಉತ್ತಮ ಚಿಕಿತ್ಸೆ ನೀಡಬಹುದು. ಸೇವೆ ಮಾಡಲು ಆತ್ಮ ಬಲವಿರಬೇಕು. ರೋಗಿಗಳ ಬಾಳಿನಲ್ಲಿ ನೀವೇ ಬೆಳಕಾಗಬೇಕು ಎಂದರು.

ಜ್ಞಾನೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಮೋಹನ್ ರಾಜ್ ಮಾತನಾಡಿ, ಕಳೆದ 15 ವರ್ಷದಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ಶಿಕ್ಷಣದ ಜತೆಗೆ ಸಂಗೀತಾ, ಕರಾಟೆ, ಚಿತ್ರಕಲೆ, ನೃತ್ಯದ ತರಬೇತಿಯನ್ನು ನೀಡಲು ಶಿಕ್ಷಕರನ್ನು ನೇಮಿಸಿದ್ದೇವೆ. ಈಜುಕೊಳ ನಿರ್ಮಾಣ ಮಾಡಲು ಯೋಜನೆ ಇದ್ದು, ಪೋಷಕರು ಸಹಕಾರ ನೀಡಬೇಕು ಎಂದರು.

ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕಿ ಡಾ.ಕೆ. ವಿಜಯಲಕ್ಷ್ಮೀ, ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್, ಕ್ರೈಸ್ತ ಗುರು ಸಿ.ಜೆ.ಸ್ಯಾಮುಯಲ್, ಡಿ.ಆಶೀರ್ವತಮ್, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸಿದ್ದರಾಜು, ಚಂದ್ರಮ್ಮ, ಮುರಳಿ, ಶಿಕ್ಷಕಿ ಹರ್ಷಿತಾ, ವೆಂಕಟೇಶ್, ಆರೋಗ್ಯ ಮೇರಿ, ಸಲ್ಮಾ, ಪುಷ್ಪಾ, ನೀತು, ಎಸ್ತಾರ್, ಕೃಪಾರಾಜ್, ಶ್ಯಾಮ್ ರಾಜ್, ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net