

ರಬಕವಿ/ಬನಹಟ್ಟ: ಗೆಲ್ಲುವ ಛಲವಿರಬೇಕು. ಸಾಧನೆಯೆಡೆಗೆ ಸಾಗುವಾಗ ಎಚ್ಚರದಿಂದ ಹೆಜ್ಜೆ ಹಾಕಬೇಕು. ಗೆದ್ದೀವಿ ಎಂದು ಮುಂದಿನ ದಾರಿಗೆ ನಿರ್ಲಕ್ಷೃ ಮಾಡಬೇಡಿ ಎಂದು ಹಳೇಹುಬ್ಬಳ್ಳಿ ನೀಲಕಂಠಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಮಕ್ಕಳಿಗೆ ಸಲಹೆ ನೀಡಿದರು.
ರಬಕವಿ ಶ್ರೀಮದ್‌ವೀರಶೈವ ಕುರುಹಿನಶೆಟ್ಟಿ ನೀಲಕಂಠೇಶ್ವರ ದೇವಸ್ಥಾನ ಸಭಾಭವನದಲ್ಲಿ ರಬಕವಿ-ಬನಹಟ್ಟಿ, ತೇರದಾಳ, ಜಮಖಂಡಿ ತಾಲೂಕಿನ ಕುರುಹಿನಶೆಟ್ಟಿ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಗಮನಾರ್ಹ ಸಾಧನೆಗೈದ ಮಕ್ಕಳಿಗೆ ನೇಯ್ಗೆ ನುಡಿ ಮಾಸಪತ್ರಿಕೆ, ನೇಯ್ಗೆ ಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ, ಬೆಳ್ಳಿ ದೀಪ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಷ್ಟಪಟ್ಟರೆ ಸುಖ ಸಿಗುವುದು, ಗುರಿಯೆಡೆಗೆ ಗಮನ ಹರಿಸಬೇಕು. ಉನ್ನತ ಗುರಿ ಹೊಂದಿ ಸಾಧನೆಯೆಡೆಗೆ ಸಾಗಬೇಕು. ಸರಿಯಾದ ಮಾರ್ಗದರ್ಶನ ಇಲ್ಲದೆ, ಶಿಸ್ತು ಇಲ್ಲದೆ ಹೋದರೆ ಮಕ್ಕಳಿಗೆ ಸಾಧನೆ ಮಾಡಲು ಸಾಧ್ಯವಾಗದು. ಅಂಕಗಳೇ ಗುರಿಯಾಗಬಾರದು. ಸ್ವಾವಲಂಬಿಯಾಗಿ ಬದುಕುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಹೊಸದನ್ನು ಸಾಧಿಸುವ ಹಂಬಲ, ತುಡಿತ ಇರಬೇಕು ಎಂದರು.
ಬಸವಶ್ರೀ ಪ್ರಶಸ್ತಿ ಪುರಸ್ಕೃತ ಜವಳಿ ಉದ್ಯಮಿ ಮಲ್ಲೇಶಪ್ಪ ಕುಚನೂರ ಅಧ್ಯಕ್ಷತೆ ವಹಿಸಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದವರ ಜೊತೆಗೆ ಸ್ವಾವಲಂಬಿಗಳಾಗಿ ತಮ್ಮ ಉದ್ಯೋಗದಲ್ಲಿ ವಿಶೇಷ ಸಾಧನೆಗೈದವರಿಗೆ ಮುಂದಿನ ದಿನಮಾನಗಳಲ್ಲಿ ಉದ್ಯೋಗ ಪ್ರತಿಭಾ ಪುರಸ್ಕಾರ ನೀಡುವುದು ಉತ್ತಮ ಎಂದರು.
ಬೆಂಗಳೂರಿನ ಬೆಳ್ಳಿದೀಪ ಸಂಸ್ಥೆ ಅಧ್ಯಕ್ಷ, ನೇಯ್ಗೆ ನುಡಿ ಮಾಸ ಪತ್ರಿಕೆ ಸಂಪಾದಕ ಡಿ.ಸಿ. ವೀರೇಂದ್ರ ಬೆಳ್ಳಿಚುಕ್ಕಿ ಮಾತನಾಡಿ, ಉತ್ತರ ಕರ್ನಾಟಕದ ಜನರ ಔದಾರ್ಯ ಗುಣ, ಎಲ್ಲರೊಂದಿಗೆ ಸ್ನೇಹ, ವಿಶ್ವಾಸದೊಂದಿಗೆ ಬೆರೆಯುವ ಸಹದಯತೆ ನಮಗೆ ಬಹಳ ಇಷ್ಟ. ನಿರಂತರ ಪರಿಶ್ರಮದಿಂದ ಸಾಧನೆಗೈದ ಮಕ್ಕಳಿಗೆ ಪ್ರೋತ್ಸಾಹಿಸಲು, ಮುಂದಿನ ಗುರಿ ಸಾಧನೆಗೆ ಅವರನ್ನು ಅಣಿಗೊಳಿಸಲು ಪ್ರತಿಭಾ ಪುರಸ್ಕಾರ ಸಹಕಾರಿ ಎಂದರು.
ರಬಕವಿ ಬನಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಕ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾನ್ವಿತ ಮಕ್ಕಳ ಸಾಧನೆಗೆ ಪ್ರೋತ್ಸಾಹಿಸಲು ಕುರುಹಿನಶೆಟ್ಟಿ ಸಮಾಜದ ಹಿರಿಯರು, ಯುವಕರು, ನೇಯ್ಗೆ ನುಡಿ ಪತ್ರಿಕೆ ಸಂಪಾದಕರು ಪ್ರತಿವರ್ಷವೂ ವೈಶಿಷ್ಟೃಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ಫೂರ್ತಿದಾಯಕವಾಗಿದೆ ಎಂದರು.
ಹೊಸೂರಿನ ಬಾಲ ಪ್ರತಿಭೆ ಸಮದ್ಧಿ ಜೈನಾಪುರ, ರಾಮಪುರದ ಪ್ರಜ್ಞಾ ಶಂಕರ ಹಟ್ಟಿ ಅವರ ಭರತ ನಾಟ್ಯ ಪ್ರದರ್ಶನ ಗಮನ ಸೆಳೆಯಿತುದವು. ಗಾಯಕಿ ಮಾಲಾ ಜಡಿ ಶಿಶುನಾಳ ಷರೀರ ತತ್ವಪದ ಹಾಡಿದರು.
ಅಶೋಕ ಕುಚನೂರ, ಚಂದ್ರು ಬಕನೆತ್ತಿ, ಶಂಕರ ಬೆಟಗೇರಿ, ಎಂ.ಎಂ. ಹೊಸಮನಿ, ನೀಲಕಂಠಪ್ಪ ಜಡಿ, ಮಹೇಶ ಜಿಡ್ಡಿಮನಿ, ಸುಭಾಸ್ ಕಂಪು, ಮಹಾದೇವ ಚಿಂಚಖಂಡಿ, ಮಹಾದೇವ ಹೆರಕಲ್ಲ, ಬಿ. ಡಿ. ಕೋಷ್ಠಿ, ಬಸವರಾಜ ಗುಡೋಡಗಿ, ಮಹಾಲಿಂಗ ತೆಳಗಿನಮನಿ, ಸಂಜು ಖವಾಸಿ, ಪ್ರಭು ಬಾದರದಿನ್ನಿ, ಮಹಾಲಿಂಗ ಘಂಟಿ, ಕಾಡೇಶ ಕಂಪು ಪಾಲ್ಗೊಂಡಿದ್ದರು.
ಕಲಾವಿದ ಈರಪ್ಪ ಮನ್ಮಿ ಪ್ರಾರ್ಥಿಸಿದರು. ಇಂದುಧರ ಬೆಳಗಲಿ ಸ್ವಾಗತಿಸಿದರು. ಶಿಕ್ಷಕ ಎನ್.ಎನ್. ಬೇವೂರ, ಚಂದ್ರಕಾಂತ ಜೈನಾಪುರ, ಮಲ್ಲಿಕಾರ್ಜುನ ಮನ್ಮಿ ನಿರೂಪಿಸಿದರು. ನಿವತ್ತ ಶಿಕ್ಷಕ ಎನ್.ಎನ್. ಕವಟಗಿ ವಂದಿಸಿದರು.
65 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ಬನಹಟ್ಟಿಯ ಐಶ್ವರ್ಯ ಆಸಂಗಿ ಅವರನ್ನು ಸನ್ಮಾನಿಸಲಾಯಿತು.
ರಬಕವಿ-ಬನಹಟ್ಟಿ, ತೇರದಾಳ, ಜಮಖಂಡಿ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಸಮಾಜದ ಹಿರಿಯರು, ಯುವಕರು ಪಾಲ್ಗೊಂಡಿದ್ದರು.