

ತೀರ್ಥಹಳ್ಳಿ: ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಪಾಠ ಪ್ರವಚನದ ಜತೆಗೆ ಸಾಮಾಜಿಕ ಹೊಣೆಗಾರಿಕೆಗೆ ಪೂರಕವಾದ ಜ್ಞಾನವನ್ನು ಮೂಡಿಸಬೇಕಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ಹೇಳಿದರು.
ಪಟ್ಟಣದ ವಾಗ್ದೇವಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ ಮತ್ತು ಆಹಾರ ಮೇಳದಲ್ಲಿ ಪಾಲ್ಗೊಂಡು ಮಾತನಾಡಿ, ಮಾರುಕಟ್ಟೆಯಲ್ಲಿ ದೊರೆಯುವ ಕಳಪೆ ಆಹಾರ ಸೇವನೆ ಮತ್ತು ಆರೋಗ್ಯದ ಬಗ್ಗೆ ಮಕ್ಕಳಲ್ಲಿ ಕಾಳಜಿ ಮೂಡಿಸಲು ಆಹಾರ ಮೇಳ ಅತ್ಯಂತ ಅವಶ್ಯ. ವಿಜ್ಞಾನ ಮೇಳ ಮಕ್ಕಳಲ್ಲಿ ವೈಜ್ಞಾನಿಕ ಕಾಳಜಿಯೊಂದಿಗೆ ಕ್ರಿಯಾಶೀಲತೆಯನ್ನೂ ಮೂಡಿಸುವಲ್ಲಿ ಹೆಚ್ಚು ಉಪಯುಕ್ತವಾಗಿದೆ ಎಂದರು.
ವಿಜ್ಞಾನ ಮೇಳದಲ್ಲಿ ಚಂದ್ರಯಾನ-೩ ಪ್ರದರ್ಶಿಸಿದ ವಿಜ್ಞಾನ ಮಾಡಲ್‌ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪಟ್ಟಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಶ್ವತ್ಥ ಗೌಡ, ಮಕ್ಕಳ ಜ್ಞಾನ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ಪಠ್ಯದಷ್ಟೇ ಮುಖ್ಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಽಕಾರಿ ವೈ.ಗಣೇಶ್, ಪಪಂ ಸದಸ್ಯೆ ಮಂಜುಳಾ ನಾಗೇಂದ್ರ ಇತರರು ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಜಗದೀಶ್ ಮಾರ್ಗದರ್ಶನ ಮಾಡಿದರು.