

ಮೈಸೂರು: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದು ಆಡಳಿತ ತರಬೇತಿ ಸಂಸ್ಧೆಯ ಮಹಾನಿರ್ದೇಶಕರಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ತ್ರಿಪುರ ರಾಜ್ಯದ ಆಡಳಿತ ಸೇವೆಗೆ ಸೇರಿದ 2024ನೇ ‘ಎ’ ವೃಂದದ ಒಟ್ಟು 30 ಅಧಿಕಾರಿಗಳಿಗೆ ಶುಕ್ರವಾರದಿಂದ ಮೇ 12ರವರೆಗೆ ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಉತ್ತಮ ಆಡಳಿತ ಹಾಗೂ ನಾಗರೀಕ ಸ್ನೇಹಿ ಯೋಜನೆಗಳಾದ ಭೂಮಿ, ಮೋಜಿಣಿ, ಸೇವಾಸಿಂಧು, ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ , ಕೂಸಿನ ಮನೆ ಇತ್ಯಾದಿ ಯಶಸ್ವಿ ಯೋಜನೆಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಈ ಮಾದರಿಯನ್ನು ತಾವೂ ಕೂಡ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಿಂದ ಪ್ರತಿವರ್ಷ ಸರಾಸರಿ 280 ತರಬೇತಿ ಕಾರ್ಯಕ್ರಮಗಳ ಮೂಲಕ ಸುಮಾರು 8400 ಗ್ರೂಪ್ ಎ ಮತ್ತು ಬಿ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತಿದೆ. ನಮ್ಮ ರಾಜ್ಯದ ಉತ್ತಮ ಆಡಳಿತದ ಬಗ್ಗೆ ತಿಳಿದುಕೊಳ್ಳಲು ಬರುವ ಇತರ ರಾಜ್ಯಗಳ ಅಧಿಕಾರಿಗಳಿಗೆ ನಮ್ಮ ಸಂಸ್ಥೆಯಿಂದ ತರಬೇತಿ ನೀಡುತ್ತಿರುವುದು ನಮ್ಮ ರಾಜ್ಯದ ಹೆಮ್ಮೆಯ ವಿಷಯವಾಗಿದೆ ಹೇಳಿದರು.
ಪ್ರಶಿಕ್ಷಣಾರ್ಥಿಗಳು ಮೈಸೂರಿನ ಪಾರಂಪರಿಕ ಸ್ಥಳಗಳು, ಚಾಮರಾಜನಗರ ಜಿಲ್ಲೆಯ ನಿಟ್ರೆ ಗ್ರಾಮ ಪಂಚಾಯಿತಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ (ಆಡಳಿತ) ಕೆ.ರೂಪಶ್ರೀ, ಜಂಟಿ ನಿರ್ದೇಶಕಿ (ತರಬೇತಿ) ಸಾಧನಾ ಅಶೋಕ್ ಪೋಟೆ, ತರಬೇತಿ ನಿರ್ದೇಶಕಿ ಡಾ.ಎಂ.ಆರ್.ಕವಿತಾ ಇತರರು ಇದ್ದರು.