ವೈಜ್ಞಾನಿಕ ಕಾರ್ಯಕ್ರಮ ರೂಪಿಸಿ ಕಾಡಾನೆ ಹಾವಳಿ ನಿಯಂತ್ರಿಸಿ: ವೆಂಕಟ್ ರಾಜಾ

dc sabhe
Published on

ಮಡಿಕೇರಿ: ವೈಜ್ಞಾನಿಕ ಕಾರ್ಯಕ್ರಮ ರೂಪಿಸಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.


ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಶನಿವಾರ ವನ್ಯಪ್ರಾಣಿ ಹಾವಳಿ ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.


ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಾಡಾನೆ ಹಾವಳಿ ನಿಯಂತ್ರಿಸುವ ಸಂಬಂಧ ಸೋಲಾರ್ ತಂತಿಬೇಲಿ ಅಳವಡಿಸುವುದು, ಟ್ರಂಚ್‌ಗಳ ನಿರ್ಮಾಣ, ರೈಲ್ವೆ ಬ್ಯಾರಿಕೇಡ್ ಹೀಗೆ ಹಲವು ಕ್ರಮ ಕೈಗೊಳ್ಳಬಹುದು ಎಂದರು.


ಕೊಡಗು ವನ್ಯಜೀವಿ ಸಂಸ್ಥೆಯ ಮಾಜಿ ಅಧ್ಯಕ್ಷ ಕರ್ನಲ್(ನಿ) ಸಿ.ಪಿ.ಮುತ್ತಣ್ಣ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಚಲನವಲನಗಳ ಬಗ್ಗೆ ದಿನನಿತ್ಯ ಗಮನಹರಿಸಿ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು. ಕಾಡಾನೆ ಹಾವಳಿಯಿಂದ ಕೃಷಿಬೆಳೆ ಸಂರಕ್ಷಿಸುವಲ್ಲಿ ಅಗತ್ಯ ಕ್ರಮವಹಿಸಬೇಕಿದೆ. ಹಾಗೆಯೇ ಸ್ಥಳೀಯರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿ, ಕಾಡಾನೆಗಳಿಂದ ರಕ್ಷಿಸಬೇಕಿದೆ ಎಂದು ಮುತ್ತಣ್ಣ ಸಲಹೆ ಮಾಡಿದರು.


ಹೆಚ್ಚಿನ ತೊಂದರೆ ನೀಡುವ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ವನ್ಯಪ್ರಾಣಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿನ ಹಾಡಿಗಳಲ್ಲಿ ಶೌಚಾಲಯ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಕರ್ನಲ್(ನಿ) ಮುತ್ತಣ್ಣ ಅವರು ಮನವಿ ಮಾಡಿದರು.


ನಾಗರಹೊಳೆ-ಬ್ರಹ್ಮಗಿರಿ ವ್ಯಾಪ್ತಿಯ ಕುಟ್ಟ ಬಳಿ ಆನೆ ಕಾರಿಡಾರ್ ನಿರ್ಮಿಸಿದಲ್ಲಿ ನಾಡಿಗೆ ಬರುವ ಕಾಡಾನೆಗಳನ್ನು ತಡೆಯಬಹುದಾಗಿದೆ. ವಯಸ್ಸಾದ ಹಾಗೂ ಗಾಯಗೊಂಡಿರುವ ಹುಲಿಗಳನ್ನು ಗುರುತಿಸಿ ಅಂತಹ ಹುಲಿಗಳಿಗೆ ಕಾಲರ್‌ಗಳನ್ನು ಅಳವಡಿಸುವಂತಾಗಬೇಕು. ಇದರಿಂದ ಜನ-ಜಾನುವಾರುಗಳ ರಕ್ಷಣೆ ಮಾಡಬಹುದಾಗಿದೆ ಎಂದು ಮುತ್ತಣ್ಣ ಸಲಹೆ ಮಾಡಿದರು.


ಅರಣ್ಯ ಪ್ರದೇಶದಲ್ಲಿ ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸಬೇಕು. ಅರಣ್ಯ ನಾಶದಿಂದ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.


ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ ಮಲೆನಾಡು ಭಾಗದಲ್ಲಿ ಆನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡಿ, ವನ್ಯ ಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಮೇವು ಅತೀ ಮುಖ್ಯ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಮೇವು ಮತ್ತು ಕುಡಿಯುವ ನೀರು ಲಭ್ಯವಾಗುವಂತೆ ಮಾಡಬೇಕು. ಆನೆಗಳು ೨೦೦ ಕಿ.ಮೀ.ವರೆಗೆ ಸಂಚಾರ ಮಾಡುತ್ತವೆ ಎಂದು ಹೇಳಿದರು.


ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಮಾತನಾಡಿ, ಕಾಡಾನೆ ಹಾವಳಿ ತಪ್ಪಿಸುವಲ್ಲಿ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆದಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.


ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಾತನಾಡಿ, ಕಾಡಾನೆಗಳು ಸಂಚರಿಸುವ ಮಾರ್ಗದಲ್ಲಿ ಬೆಳಗಿನ ಜಾವದಲ್ಲಿ ಮತ್ತು ಹೆಚ್ಚಿನ ಮಂಜು ಆವರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಓಡಾಡುವುದನ್ನು ತಪ್ಪಿಸಬೇಕು. ಇದರಿಂದ ಸಾಕಷ್ಟು ಸುರಕ್ಷತೆ ಕಾಪಾಡಬಹುದಾಗಿದೆ ಎಂದು ಹೇಳಿದರು.


ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಅವರು ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇಲಾಖೆಯಿಂದ ಸೋಲಾರ್ ಲೈಟ್ ಮತ್ತಿತರ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದರು.


ಕೊಡಗು ಜಿಲ್ಲೆಯಲ್ಲಿ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳ ಹಾವಳಿಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣ ಅಗತ್ಯ ಎಂದು ಕೂರ್ಗ್ ವೈಲ್ಡ್ ಲೈಪ್ ಸೊಸೈಟಿಯ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.


ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net