ನೀತಿಕಥೆಗಳ ಮೂಲಕ ಮಕ್ಕಳಲ್ಲಿ ಸಾತ್ವಿಕ ಗುಣಗಳನ್ನು ಬೆಳೆಸಿ

8 nrp 2
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಅಜ್ಜಿಯ ಕೈ ತುತ್ತು ಕಾರ್ಯಕ್ರಮದಡಿ ಸಾಹಿತಿ ಜಯಮ್ಮ ಮಕ್ಕಳಿಗೆ ಕಥೆ ಹೇಳಿದರು. ರಾಜೇಶ್ವರಿ, ಶಶಿಕಲಾ, ಶ್ರೀಮತಿ, ಪವಿತ್ರಾ, ರೇಷ್ಮಾ ಇದ್ದರು.
Published on

ಎನ್.ಆರ್.ಪುರ: ಮಕ್ಕಳಿಗೆ ನ್ಯಾಯ, ನೀತಿ, ಧರ್ಮ, ಸಹನೆ, ಕರುಣೆಯುಳ್ಳ ನೀತಿ ಕಥೆಗಳನ್ನು ಹೇಳುವುದರಿಂದ ಅವರಲ್ಲಿ ಸಾತ್ವಿಕ ಗುಣಗಳು ಬೆಳೆಯುತ್ತದೆ ಎಂದು ಸಾಹಿತಿ ಎಂ.ಜಯಮ್ಮ ಹೇಳಿದರು.
ಸೋಮವಾರ ಹಿಳುವಳ್ಳಿಯ ಗಣಪತಿ ಪೆಂಡಾಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನಾ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಅಜ್ಜಿಯ ಕೈ ತುತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನೀತಿ ಕಥೆ ಹೇಳುವುದರಿಂದ ಅವರಲ್ಲಿ ಚಿಂತನೆ, ಸೃಜನಾತ್ಮಕ ಕೌಶಲ್ಯ ವೃದ್ಧಿಯಾಗಲಿದೆ ಎಂದು ಹೇಳಿದರು
ಕಥೆಗಳನ್ನು ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ಹಾಗೂ ಪ್ರಾಕೃತಿಕ ಎಂದು ವಿಂಗಡಿಸಬಹುದು. ಈ ಎಲ್ಲಾ ಪ್ರಕಾರದ ಕಥೆಗಳು ಜಾನಪದ ಸಾಹಿತ್ಯದಲ್ಲೂ ಕಾಣಬಹುದಾಗಿದೆ. ಗದ್ಯ ರೂಪ, ಪದ್ಯ ರೂಪದಲ್ಲೂ ಕಥೆಗಳಿವೆ. ಬಸವಣ್ಣ, ಸರ್ವಜ್ಞ ಮುಂತಾದ ವಚನಕಾರರ ತ್ರಿಪದಿ, ಷಟ್ಟದಿಗಳಲ್ಲೂ ಇತಿಹಾಸ ಸಾರುವ ಹಾಗೂ ನೀತಿ ಕಥೆಯನ್ನು ಕಾಣಬಹುದು ಎಂದರು.
ಹಿಂದೆ ಪ್ರತಿ ಕುಟುಂಬಗಳಲ್ಲೂ ಅಜ್ಜಿಯರು ಮೊಮ್ಮಕ್ಕಳಿಗೆ ಕೈ ತುತ್ತು ತಿನ್ನಿಸಿ ಸಂಭ್ರಮಿಸುತ್ತಿದ್ದರು. ಇದರಿಂದ ಅಜ್ಜಿ, ಮೊಮ್ಮಗ, ಮೊಮ್ಮಗಳ ಮಧ್ಯ ಬಾಂಧವ್ಯ, ಆಪ್ತತೆ ವೃದ್ಧಿಯಾಗುತ್ತಿತ್ತು. ಮನೆಗಳಲ್ಲಿ ಊಟ ಮಾಡುವಾಗ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದರು. ಆದರೆ ಇಂದು ಈ ಪದ್ದತಿಯಿಂದ ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಶಶಿಕಲಾ ಮಾತನಾಡಿ, ಧರ್ಮಸ್ಥಳದ ಮಾತೃ ಶ್ರೀ ಅಮ್ಮನವರ ಆಶಯದಂತೆ ಎಲ್ಲಾ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲೂ ಅಜ್ಜಿ ಕೈ ತುತ್ತು ಹಾಗೂ ಅಜ್ಜಿಯ ನೀತಿ ಕಥೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿಂದೆ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುತ್ತಾ ಊಟ ಮಾಡಿಸುತ್ತಿದ್ದರು. ಈಗ ಮೊಬೈಲ್ ಕೊಟ್ಟು ಊಟ ಮಾಡಿಸುತ್ತಿದ್ದಾರೆ. ನೀತಿ ಕಥೆಗಳು ಮರೆತು ಹೋಗುತ್ತಿದೆ. ಅದನ್ನು ಮತ್ತೆ ಪ್ರಾರಂಭಿಸುವ ಉದ್ದೇಶದಿಂದ ಅಜ್ಜಿಯ ಕಥೆ ಹೇಳುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ, ಸದಸ್ಯೆ ಶ್ರೀಮತಿ, ಸಾಧನ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಪವಿತ್ರ, ರೇಷ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net