

ದೇವದುರ್ಗ: ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾದರೆ, ಕಲಿಕಾ ಹಬ್ಬ ಶೈಕ್ಷಣಿಕ ಪ್ರಗತಿಗೆ ಪೂರಕ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ ಹೇಳಿದರು.
ಪಟ್ಟಣದ ಪಟೇಲ್ ಓಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಿದ್ದ ದಕ್ಷಿಣ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ನಾಲ್ಕು ಗೋಡೆಗಳ ಮಧ್ಯೆ ಹೇಳುವ ಪಾಠಕ್ಕಿಂತ ಪ್ರಾಯೋಗಿಕ ಪಾಠಗಳೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದರು.
ಸಾಕ್ಷರತೆ, ಸಂಖ್ಯಾಜ್ಞಾನ ಆಧಾರಿತ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬ ಸಹಕಾರಿ. ಕಲಿಕಾ ಹಬ್ಬ ಮಗುವಿನ ಸ್ವಕಲಿಕೆ ವಿಧಾನವಾಗಿದೆ. ಮಕ್ಕಳು ಸ್ನೇಹಿತರೊಂದಿಗೆ ಸೇರಿಕೊಂಡು ಒಡನಾಟದ ಮೂಲಕ ಪ್ರಶ್ನೆಗಳು, ಪ್ರಯೋಗಗಳು, ವೀಕ್ಷಣೆಗಳು ಸೇರಿ ಅನುಭಾವಾತ್ಮಕವಾಗಿ ಕಲಿಯಲಿದ್ದಾರೆ. ಪರಸ್ಪರ ಚರ್ಚೆಗಳು, ಮುಕ್ತ ಸಂವಾದಗಳು, ಹಲವಾರು ಯೋಜನೆಗಳು, ಹಾಡು, ನೃತ್ಯ, ನಾಟಕಗಳ ಮೂಲಕ ಶಿಕ್ಷಕರ ನೆರವಿನಿಂದ ವಿದ್ಯಾರ್ಥಿಗಳು ಸ್ವತಃ ವಿಮರ್ಶಾತ್ಮಕ ಚಿಂತನೆಗಳು ಬೆಳೆಸಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಸಕಾರಾತ್ಮಕ ಚಿಂತನೆ ಬೆಳೆಸಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಸಾಬಣ್ಣ, ಪುರಸಭೆ ಸದಸ್ಯ ನಾಗಪ್ಪ ನಾಡದಾಳ, ಪ್ರಮುಖರಾದ ದೊಡ್ಡರಂಗಣ್ಣಗೌಡ ಅಳ್ಳುಂಡಿ, ಮಹಾದೇವಪ್ಪ, ಶರಣಪ್ಪ ತುಮಕೂರು, ವೆಂಕಟೇಶ, ಬಿಆರ್‌ಸಿ ಸುರೇಶ್, ಮುಖ್ಯಶಿಕ್ಷಕಿ ಪವಿತ್ರಾ, ತುಳಜಾರಾಮ್, ಶಿಕ್ಷಕರಾದ ಗುರುಸ್ವಾಮಿ, ಶಿಲ್ಲಾರುದ್ದೀನ್, ದಾನಮ್ಮ ಬಿರಾದಾರ್, ಉಮಾದೇವಿ ಪಾಟೀಲ್, ಮೀನಾಕ್ಷಿ, ರಮೇಶದಾಸರ್ ಇತರರಿದ್ದರು.