ತಾಂತ್ರಿಕ ಕ್ಷೇತ್ರಗಳ ಜ್ಞಾನ ಬೆಳೆಸಿಕೊಂಡು ನಿಪುಣರಾಗಿ : ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ

1
Published on

ಮೈಸೂರು: ಇಂದಿನ ವಿದ್ಯಾರ್ಥಿಗಳು ಎಐ, ಸೈಬರ್ ಸುರಕ್ಷತೆ ಸೇರಿದಂತೆ ಇನ್ನಿತರ ತಾಂತ್ರಿಕ ಕ್ಷೇತ್ರಗಳಲ್ಲಿ ಜ್ಞಾನ ಬೆಳೆಸಿಕೊಂಡು ಪಾರಂಗತರಾಗಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

ಶ್ರೀ ಅನಿಕೇತನ ಟ್ರಸ್ಟ್‌ನ ಅಂಗಸಂಸ್ಥೆಯಾದ ಪರಿವರ್ತನಾ ಬಿಸಿನೆಸ್ ಸ್ಕೂಲ್‌ನ 2023-25ನೇ ಸಾಲಿನ ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳಿಗೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರ ಇಂದು ಶರವೇಗದಲ್ಲಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಹೊಂದಾಣಿಕೆ ಆಗುವುದು ಇಂದಿನ ಯುವ ಜನಾಂಗಕ್ಕೆ ಅನಿವಾರ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಎಐ, ಸೈಬರ್ ಸುರಕ್ಷತೆ ಸೇರಿದಂತೆ ಇನ್ನಿತರ ತಾಂತ್ರಿಕ ಕ್ಷೇತ್ರಗಳಲ್ಲಿ ಜ್ಞಾನ ಪಡೆದು ಆ ಕ್ಷೇತ್ರದಲ್ಲಿ ಪಾರಂಗತರಾಗಬೇಕು ಎಂದು ಸಲಹೆ ನೀಡಿದರು.

ಎಂಬಿಎ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉತ್ತಮ ಸಂಬಳದ ಹುದ್ದೆಗಳ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ತಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು. ಕೇವಲ ಸಂಪಾದನೆಯೊಂದೆ ಜೀವನದ ದಾರಿಯಾಗಬಾರದು. ಸಮಾಜ ಸೇವೆ ಮೂಲಕ ಉತ್ತಮ ಜಗತ್ತನ್ನು ನಿರ್ಮಿಸಬಹುದು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಮಾತನಾಡಿ, ಪಿಎಚ್.ಡಿ ಅಧ್ಯಯನಗಳಿಗೆ ಸಂಬಂಧಿಸಿದಂತೆ ಯುಜಿಸಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 120 ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರೂ ವಿಭಿನ್ನ ವೃತ್ತಿಪರ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಓಂ ಶ್ರೀನಿಕೇತನ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಪುಟ್ಟೇಗೌಡ ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯವನ್ನು ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ. ಈ ಪದವಿ ಪ್ರದಾನ ಸಮಾರಂಭವು ನಮ್ಮನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ದಿಕ್ಸೂಚಿಯಾಗಿದೆ ಎಂದು ಹೇಳಿದರು.

ನಿರ್ವಹಣಾ ಟ್ರಸ್ಟಿ ಬಿ.ವಿ.ಕುಮಾರ್, ಖಜಾಂಚಿ ಡಾ.ಕೆ.ಬಿ.ಧನಂಜಯ, ವ್ಯವಸ್ಥಾಪಕ ನಿರ್ದೇಶಕ ಮಂಜುರಾಮ ಪುಟ್ಟೇಗೌಡ, ಶೈಕ್ಷಣಿಕ ನಿರ್ದೇಶಕ ಪ್ರೊ.ಎನ್.ರಾಮು, ಕಾನೂನು ಕಾಲೇಜಿನ ನಿರ್ದೇಶಕ ಕೆ.ಬಿ.ವಾಸು, ಪ್ರಾಂಶುಪಾಲ ಡಾ.ಜಿ.ರಘುನಂದನ್, ಆಡಳಿತಾಧಿಕಾರಿ ಡಾ.ಎಂ.ಎಂ.ಕೃಷ್ಣ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ 120 ಎಂಬಿಎ ಮತ್ತು 45 ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net