

ದಾಂಡೇಲಿ: ಕೆನರಾ ವೆಲ್ಫೇರ್ ಟ್ರಸ್ಟ್ ಬಿ.ಇಡಿ ಕಾಲೇಜ್ ಸಭಾಭವನದಲ್ಲಿ ಶ್ರೀಗಂಧ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಜಾಗೃತಿ ಶಿಬಿರದಲ್ಲಿ ಬಿ.ಇಡಿ ಪದವಿ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.
ಶ್ರೀಗಂಧ ಟ್ರಸ್ಟ್ ಅಧ್ಯಕ್ಷ ರಾಜೇಶ ತಳೇಕರ ಮಾತನಾಡಿ, ನಗರ ಪ್ರದೇಶದ ಜನರು ಮತ್ತು ವಿದ್ಯಾರ್ಥಿಗಳಲ್ಲಿ ಕೃಷಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಕೃಷಿ ಬಗ್ಗೆ ಒಲವು ಇಟ್ಟುಕೊಳ್ಳಬೇಕು. ಕಾರ್ಯಕ್ರಮದ ನೆನಪುಗಳು ನಿಮ್ಮ ಮನದಲ್ಲಿ ಸದಾ ಹಸಿರಾಗಿರಲಿ ಎನ್ನುವ ಉದ್ದೇಶದಿಂದ ಅಭಿನಂದನಾ ಪತ್ರ ವಿತರಿಸಿದ್ದೇವೆ ಎಂದರು.
ಬಿ.ಇಡಿ ಕಾಲೇಜಿನ ಪ್ರಾಚಾರ್ಯು ಡಾ. ಸಹನಾ ಸೂರ್ಯವಂಶಿ ಮಾತನಾಡಿ, ಕೃಷಿ ಜಾಗೃತಿ ಶಿಬಿರದ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಕೃಷಿಯ ಕುರಿತು ಒಲವು ಮೂಡಿಸುವ ನಿಟ್ಟಿನಲ್ಲಿ ಶ್ರೀಗಂಧ ಟ್ರಸ್ಟ್ನ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ದಾಂಡೇಲಿ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಎಸ್. ಜೈನ್ ಮಾತನಾಡಿ, ಕೃಷಿ ಮರೆತಿರುವ ನಗರ ಪ್ರದೇಶದ ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಬೆವರು ಹರಿಸಿ ದುಡಿಯುವ ರೈತರು ಹೆಚ್ಚು ಆರೋಗ್ಯದಿಂದ ಬಾಳುತ್ತಿದ್ದಾರೆ. ಕೃಷಿಯಿಂದ ಆರೋಗ್ಯ ವೃದ್ಧಿಸುತ್ತದೆ ಎನ್ನುವುದನ್ನು ಮರೆಯಬಾರದು ಎಂದರು.
ಶ್ರೀಗಂಧ ಟ್ರಸ್ಟ್ ಕಾರ್ಯದರ್ಶಿ ಸುಧೀರ ಶೆಟ್ಟಿ, ಎಲ್.ಎಸ್. ಗಸ್ತಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಸಿದ್ದರಾಜು ಗಸ್ತಿ, ಇತರರಿದ್ದರು. ಉಪನ್ಯಾಸಕ ನಾಗೇಶ ಎಂ. ನಾಯ್ಕ ಹಾಗೂ ವಿದ್ಯಾರ್ಥಿ ಕಾಶಪ್ಪ ಬಸನ್ನವರ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಬಿ. ಇಡಿ ಕಾಲೇಜಿನ ಹಿರಿಯ ಉಪನ್ಯಾಸಕ ನೀಲಕಂಠ ಜಿ. ನಾಯ್ಕ, ದೀಪಾ ಟಿ. ನಾಯ್ಕ, ವಾಣಿ ರುದ್ರಪಾಟಿ, ಗ್ರಂಥಪಾಲಕ ಡಿ.ಪಿ. ನಾರಾಯಣಕರ ಮತ್ತು ಬಿ.ಇಡಿ ವಿದ್ಯಾರ್ಥಿಗಳು ಇದ್ದರು.