

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರವು ಕರ್ನಾಟಕದ ಎರಡನೇ ದೊಡ್ಡ ನಗರ, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರ ಎಂದು ಕೇವಲ ಬಾಯಿ ಮಾತಿನಲ್ಲಿ ಸರ್ಕಾರ ಹೇಳುತ್ತದೆಯೋ ಅಥವಾ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿಯೂ ಇತ್ತ ಕಡೆ ಲಕ್ಷ್ಯ ವಹಿಸುತ್ತದೆಯೋ? ಎಂಬ ಪ್ರಶ್ನೆ ಉದ್ಭವವಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಬೆಂಗಳೂರು ಸಮೀಪದಲ್ಲಿಯೇ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಇದಕ್ಕಾಗಿ 5 ಸಾವಿರ ಎಕರೆ ಜಮೀನು ಸ್ವಾಧಿನಕ್ಕೂ ಯೋಚನೆ ಮಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಉಚಿತ? ಎಂಬ ಪ್ರಶ್ನೆಯನ್ನು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಉತ್ತರ ಕರ್ನಾಟಕ ಭಾಗದ ಜನರು ಕೇಳುತ್ತಿದ್ದಾರೆ.
ಹುಬ್ಬಳ್ಳಿ ಉತ್ತರ ಭಾರತ ಮತ್ತು ದಣ ಭಾರತದ ನಡುವಿನ ಕೊಂಡಿಯಾಗಿದೆ. ರಸ್ತೆ ಹಾಗೂ ರೈಲು ಮಾರ್ಗಗಳಿಂದ ಉತ್ತಮ ಸಂಪರ್ಕ ಹೊಂದಿರುವುದರಿಂದ ವ್ಯಾಪಾರ ವಹಿವಾಟು ಮತ್ತು ಸರಕು ಸಾಗಾಣಿಕೆಯಲ್ಲಿ ಮಹತ್ವ ಪಡೆದುಕೊಂಡಿದೆ. ಹುಬ್ಬಳ್ಳಿ ನಗರದಲ್ಲಿ ಈಗಿರುವ ವಿಮಾನ ನಿಲ್ದಾಣವು ಸುಮಾರು 927 ಎಕರೆ ವಿಸ್ತೀರ್ಣದಲ್ಲಿದ್ದು 3,400 ಮೀಟರ್ ಉದ್ದದ ರನ್ವೇ ಹೊಂದಿದೆ.
ಅಲ್ಲದೇ ನೈಟ್ ಲ್ಯಾಂಡಿಂಗ್ ಸೇರಿ ಹಲವು ಸೌಲಭ್ಯಗಳನ್ನು ಹೊಂದಿದ್ದು, ಸುಸಜ್ಜಿತವಾದ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ಅಂತಾರಾಷ್ಟ್ರೀಯ ಮಟ್ಟಕ್ಕೇರುವ ಎಲ್ಲ ಅರ್ಹತೆಗಳನ್ನು ಹೊಂದಿದೆ.
ಈ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭೂಸ್ವಾಧಿನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಈ ಭಾಗದ ರೈತರಿಗೆ ಮತ್ತು ಉದ್ದಿಮೆದಾರಾರಿಗೆ ಕೊಟ್ಟಿರುವ ಸೂಚನಾ ಪತ್ರದಲ್ಲಿಯೂ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕಾಗಿ ಭೂಸ್ವಾಧಿನ ಎಂದು ತಿಳಿಸಲಾಗಿದೆ.
ಇಷ್ಟೆಲ್ಲ ಇದ್ದರೂ ಕರ್ನಾಟಕ ಸರ್ಕಾರ ಬೆಂಗಳೂರಿನ ಹೊರವಲಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಪ್ರಸ್ತಾಪ ಮಾಡಿದೆ. ಇದಕ್ಕೆ ಬೇಕಾದ 5 ಸಾವಿರ ಎಕರೆ ಸ್ವಾಧಿನಕ್ಕೆ ಚಿಂತನೆ ನಡೆಸಿದೆ.
ದುಬಾರಿಯಾಗಿರುವ ಜಮೀನಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಬೆಂಗಳೂರು ಬಳಿ ಫಲವತ್ತಾದ ಭೂಮಿ ಕಳೆದುಹೋಗುತ್ತದೆ. ಪರಿಸರ ಅಸಮತೋಲನವೂ ಉಂಟಾಗುತ್ತದೆ.
ಈ ಎಲ್ಲ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೇ ಈಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಿ, ಒತ್ತಡವನ್ನು ಸೀಮಿತ ವೆಚ್ಚದಲ್ಲಿ ನಿರ್ವಹಿಸಬಹುದು.
ತಲೆಮಾರುಗಳಿಂದ ಅಭಿವೃದ್ಧಿ ಕಾಣದ ಉತ್ತರ ಕರ್ನಾಟಕ ಭಾಗದಲ್ಲಿ ಆಥಿರ್ಕ ಚಟುವಟಿಕೆ ವೇಗಗೊಂಡು ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮುನ್ನುಡಿ ಬರೆದಂತಾಗುತ್ತದೆ.
ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಉತ್ತರ ಕರ್ನಾಟಕದ ಜನರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಜಿ. ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹಾಗೂ ಕಾಮಿರ್ಕ ಸಚಿವ ಸಂತೋಷ ಲಾಡ್ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ ತಿಳಿಸಿದ್ದಾರೆ.