

ಎನ್.ಆರ್.ಪುರ: ಮಕ್ಕಳು ಶಾಲಾ ಹಂತದಲ್ಲೇ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಹೇಳಿದರು.
ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಗರ ಪ್ರದೇಶದಲ್ಲಿ ಪರಿಸರ ಸಂಪೂರ್ಣ ಹಾಳಾಗಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ವಾತಾವರಣ ಇದೆ. ನಾವು ಭೂತಾಯಿ ರಕ್ಷಣೆ ಮಾಡಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ 125ಕ್ಕೆ 125 ಅಂಕ ಪಡೆದ ಮಕ್ಕಳನ್ನು ಗುರುತಿಸಿ ಪುರಸ್ಕರಿಸಿದ್ದೇವೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಶಾಲೆಗಳಲ್ಲೂ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗುರುತಿಸಿ ಅಭಿನಂದಿಸುತ್ತೇವೆ. ಅಲ್ಲದೆ ಜಾನಪದ ಹಾಡು, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತೇವೆ. ತಾಲೂಕು ಕಸಾಪದಿಂದ ಮಕ್ಕಳಿಗೆ ಕನ್ನಡದಲ್ಲಿ ಸುಂದರ ಕೈ ಬರಹ ಸ್ಪರ್ಧೆ ಹಾಗೂ ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಮುಂದೆ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯೆ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿರುವ 34 ವಸತಿ ಶಾಲೆಗಳಲ್ಲಿ ನಮ್ಮ ಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಎಂದರು.
ಪ್ರಾಚಾರ್ಯೆ ಪೂರ್ಣಿಮಾ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಕನ್ನಡದಲ್ಲಿ ಪೂರ್ಣಾಂಕ ಪಡೆದ ಪಿ.ಮಾನ್ಯಾ, ಅಕ್ಕಮಹಾದೇವಿ, ಶೋಭಾ ಅವರಿಗೆ ಸಾಧಕ ಪುರಸ್ಕಾರ ನೀಡಲಾಯಿತು. ಅಡುಗೆ ಸಿಬ್ಬಂದಿ ಸುಜಾತಾ, ಮಂಜುಳಾ, ಗೋಪಾಲಕೃಷ್ಣ ಅವರಿಗೆ ಸೇವಾ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿನಿಯರಿಗೆ ಜೇಸಿ ವಲಯ ಅಧಿಕಾರಿ ಚರಣರಾಜ್ ಪ್ರೋತ್ಸಾಹಧನ ನೀಡಿದರು.
ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್, ಗ್ರಾಪಂ ಸದಸ್ಯ ಶ್ರೀನಾಥ್, ಕಿತ್ತೂರು ರಾಣಿ ವಸತಿ ಶಾಲೆ ಪ್ರಾಚಾರ್ಯೆ ಅಜ್ಜಪ್ಪ, ಶಶಿಕಲಾ, ವಸಂತಿ, ಚರಣರಾಜ್, ರಾಮಮೋಹನ್ ಇದ್ದರು.