

ಸಮರ್ಥ ಬೋಧನಾ ಕೌಶಲ ರೂಢಿಸಿಕೊಳ್ಳಿ
ವಿಜಯವಾಣಿ ಸುದ್ದಿಜಾಲ ಧಾರವಾಡ
ಬೋಧನೆ ಒಂದು ಕಲೆ ಆಗಿದ್ದು, ಶಿಕ್ಷಕ ವೃತ್ತಿ ಸುಲಭವಾದ ವೃತ್ತಿ ಅಲ್ಲ. ಸಮರ್ಥವಾಗಿ ಬೋಧನೆ ಮಾಡುವ ಕೌಶಲ ರೂಢಿಸಿಕೊಳ್ಳಬೇಕು ಎಂದು ಕವಿವಿ ಪ್ರಭಾರ ಕುಲಪತಿ ಪ್ರೊ. ಆರ್.ಎಲ್. ಹೈದರಾಬಾದ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಮಾಳವಿಯಾ ಮಿಷನ್ ಟೀಚರ್ಸ್ ಟ್ರೇನಿಂಗ್ ಸೆಂಟರ್ ಸಹಯೋಗದಲ್ಲಿ ಕವಿವಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಭಾರತೀಯ ಉನ್ನತ ಶಿಕ್ಷಣ ಮತ್ತು ಸಮಾಜದಲ್ಲಿ ಶಿಕ್ಷಕರ ಪಾತ್ರ ಕುರಿತು ಮಾತನಾಡಿದರು.
ಬದಲಾದ ಕಾಲಕ್ಕೆ ಬೋಧನಾ ಶೈಲಿ ಮತ್ತು ಪಠ್ಯಕ್ರಮ ಬದಲಾಗಬೇಕು. ಪ್ರಸ್ತುತ ತಂತ್ರಜ್ಞಾನ ಬೋಧನೆ ಸಂಶೋಧನೆಗೆ ಹೆಚ್ಚು ಪೂರಕವಾಗಿದೆ. ವಿದ್ಯಾರ್ಥಿಗಳು ಪದವಿ ನಂತರ ಉದ್ಯೋಗ ಪಡೆದುಕೊಳ್ಳುವಲ್ಲಿ ಸಮರ್ಥ ಮಾನವ ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸುವುದು ಶಿಕ್ಷಕರ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಎಚ್.ನಾಗೂರ ಮಾತನಾಡಿ, ಶಿಕ್ಷಕರ ಬೋಧನಾ ಮತ್ತು ಸಂಶೋಧನಾ ಸಾಮರ್ಥ್ಯ ಕೇಂದ್ರದ ವತಿಯಿಂದ ಅನೇಕ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ವಿಷಯ ಸಂಯೋಜಕ ಡಾ. ಅಶೋಕ ಹುಲಬಂಡಿ, ಮನೋವಿಜ್ಞಾನ ವಿಷಯದ ಪ್ರಾಧ್ಯಾಪಕಿ ಡಾ. ತೇಜಸ್ವಿನಿ.ಎಸ್, ಇತರರು ಇದ್ದರು.