ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳಸಿ

1686837810698_15-Jaggu-9.jpg
Published on

ಬೆಳಗಾವಿ: ಪ್ರಸ್ತುತ ಜಗತ್ತು ಸ್ಪರ್ಧಾತ್ಮಕತೆಯಿಂದ ಕೂಡಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯ, ಪಠ್ಯೇತರ ಚಟುವಟಿಕೆಗಳ ಜ್ಞಾನ ನೀಡುವ ಮೂಲಕ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಹೊಂದಿವೆ ಎಂದು ಹಾಸ್ಯ ಭಾಷಣಕಾರ ಪ್ರೊ. ಎಂ.ಕೃಷ್ಣೇಗೌಡ ಹೇಳಿದರು.
 ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಣಿ ಚನ್ನಮ್ಮ ವಿವಿ ಪಿಜಿ ಜಿಮಖಾನಾ ವಿದ್ಯಾರ್ಥಿ ಒಕ್ಕೂಟ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
 ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಭವಿಷ್ಯ ರೂಪಿಸಿಕೊಳ್ಳುವ ಸಲಕರಣೆಗಳನ್ನು ಒದಗಿಸಬೇಕು. ಇಂದಿನ ಯುಗ ಜ್ಞಾನದ ಯುಗ. ಜ್ಞಾನಕ್ಕೆ ಇಡೀ ವಿಶ್ವವೇ ತಲೆ ಬಾಗುತ್ತದೆ. ನಮ್ಮ ದೇಶದಲ್ಲಿನ ಕುಗ್ರಾಮದ ಪ್ರತಿಭೆಗಳು ಇಂದು ಅವರಲ್ಲಿನ ಜ್ಞಾನದ ಮೂಲಕ ಜಗತ್ತನ್ನೇ ಆಳುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ಮಾಡುವ ಮೂಲಕ ವಿದ್ಯಾರ್ಥಿ ಮತ್ತು ದೇಶದ ಭವಿಷ್ಯ ರೂಪಿಸಬೇಕು ಎಂದರು.
 ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಂ.ರಾಮಚಂದ್ರ ಗೌಡ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭೌತಿಕ ಸಾಮರ್ಥ್ಯ ವೃದ್ಧಿಸುತ್ತದೆ. ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ನಮ್ಮ ವಿವಿಯ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.
 ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯ ಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ, ವಿತ್ತಾಧಿಕಾರಿ ಪ್ರೊ. ಎಸ್.ಬಿ.ಆಕಾಶ್, ಜಿಮಖಾನಾ ಅಧ್ಯಕ್ಷ ಪ್ರೊ. ವಿಜಯ ನಾಗಣ್ಣವರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಬಸವರಾಜ ಪದ್ಮಶಾಲಿ, ಜಿಮಖಾನಾ ಉಪಾಧ್ಯಕ್ಷ ಡಾ. ಗಜಾನನ ನಾಯ್ಕ, ಸೋನಾಲಿ ಕಾರವೇಕರ, ಡಾ. ಪಿ.ನಾಗರಾಜ ಇತರರಿದ್ದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net