

ಬೇಲೂರು: ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ವೈಜ್ಞಾನಿಕ ಪ್ರದರ್ಶನ, ತಾರಾಲಯಗಳು ಮತ್ತು ದೂರದರ್ಶಕಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಯೋಜಿಸುವ ಮೂಲಕ ಅಂತರಿಕ್ಷದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್‌ನ ‘ಎ’ ಗ್ರೂಪ್ ಡೈರೆಕ್ಟರ್ ರಾಜೇಂದ್ರ ಹೇಳಿದರು
ಬೇಲೂರು ಪಟ್ಟಣದ ಪೂರ್ಣಪ್ರಜ್ಞ ಶಾಲೆಯಲ್ಲಿ ಸೋಮವಾರ ಯುಆರ್‌ರಾವ್ ಸ್ಯಾಟಲೈಟ್ ಸೆಂಟರ್ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅ.4 ರಿಂದ 10 ರವರೆಗೆ ವಿಶ್ವದ 80 ದೇಶಗಳಲ್ಲಿ ಸಾವಿರಾರು ಕಾರ್ಯಕ್ರಮ ಆಯೋಜಿಸಲಾಗಿದೆ. ಇವುಗಳಲ್ಲಿ ಶೈಕ್ಷಣಿಕ ಕಾರ್ಯಾಗಾರ, ಆನ್‌ಲೈನ್ ಉಪನ್ಯಾಸ, ದೂರದರ್ಶಕಗಳ ಮೂಲಕ ಗ್ರಹಗಳನ್ನು ವೀಕ್ಷಿಸುವ ಅವಕಾಶಗಳೂ ಸೇರಿವೆ. ಬಾಹ್ಯಾಕಾಶ ಮತ್ತು ಕಾಸ್ಮಿಕ್ ಆವಿಷ್ಕಾರಗಳ ಮಹತ್ವದ ಬಗ್ಗೆಯೂ ಜನರಿಗೆ ಶಿಕ್ಷಣ ನೀಡುವ ಗುರಿ ಹೊಂದಿದೆ ಎಂದರು.
ವಿಶ್ವ ಬಾಹ್ಯಾಕಾಶ ಸಪ್ತಾಹವು ಬಾಹ್ಯಾಕಾಶ ಶಿಕ್ಷಣ ಮತ್ತು ಬಾಹ್ಯಾಕಾಶ ಸಂಸ್ಥೆಗಳು, ಏರೋಸ್ಪೇಸ್ ಕಂಪನಿಗಳು, ಶಾಲೆಗಳು, ತಾರಾಲಯಗಳು, ವಸ್ತುಸಂಗ್ರಹಾಲಯಗಳು ಮತ್ತು ಖಗೋಳಶಾಸ್ತ್ರ ಕ್ಲಬ್‌ಗಳು ಪ್ರಪಂಚದಾದ್ಯಂತ ಸಾಮಾನ್ಯ ಸಮಯದ ಚೌಕಟ್ಟಿನಲ್ಲಿ ನಡೆಸುವ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಆಧುನಿಕ ಜಗತ್ತಿನಲ್ಲಿ ಉಪಗ್ರಹಗಳ ಸ್ಥಾನ, ಉಪಯೋಗ, ಅವುಗಳ ಬಳಸುವ ಬಗೆ, ಅಂತರಿಕ್ಷದಲ್ಲಿ ನಮ್ಮದೇ ಆದ ನಿಲ್ದಾಣ ಸ್ಥಾಪಿಸಿ ಉಪಗ್ರಹಗಳ ಉಡಾವಣೆ, ರಿಪೇರಿ, ಹೊರ ಜಗತ್ತಿನ ವೀಕ್ಷಣೆ ಇತ್ಯಾದಿಗಳ ಸಾಧ್ಯ ಸಾಧ್ಯತೆಗಳು ಎಷ್ಟರ ಮಟ್ಟಿಗೆ ಮುಂದುವರಿದಿವೆ ಎಂದರೆ ಜಗತ್ತಿನ ಬೇರೆ ರಾಷ್ಟ್ರಗಳು ಮುಂಚೂಣಿಯಲ್ಲಿರಲು ಸ್ಪರ್ಧೆ ಏರ್ಪಟ್ಟಿದೆ ಎಂದು ಹೇಳಿದರು.
ದಿನದಿಂದ ದಿನಕ್ಕೆ ಹೊಸ ಕಲ್ಪನೆಗಳ ಮೂಲಕ ಉದ್ಯಮಿಗಳು ಈ ಕ್ಷೇತ್ರಕ್ಕೆ ದಾಪುಗಾಲಿಡುತ್ತಿದ್ದಾರೆ. ಚಂದ್ರಾನ್ವೇಷಣೆ, ಮಂಗಳನತ್ತ ಪಯಣ ಇತ್ಯಾದಿ ಆಗುತ್ತಿವೆ. ಎಲ್ಲ ಉಪಗ್ರಹಗಳು ಒಂದಲ್ಲ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ್ದವು. ಸಂವಹನಕ್ಕಾಗಿ, ಮಿಲಿಟರಿ ಉದ್ದೇಶಗಳಿಗಾಗಿ, ಭೂ ಪ್ರದೇಶದ ಮಾಹಿತಿಗಾಗಿ, ಸಂಶೋಧನೆಗಳಿಗಾಗಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಂದಿನ ಜನಾಂಗ ಈ ಕ್ಷೇತ್ರದ ಬಗ್ಗೆ ಅರಿತು ಇದರಲ್ಲಿ ತೊಡಗುವ ಆಸಕ್ತಿ ಮೂಡಬೇಕು. ಬಾಹ್ಯಾಕಾಶ ಸಂಶೋಧನೆ, ಶಿಕ್ಷಣ ಹೊಸ ಮಜಲನ್ನು ತಲುಪಬೇಕೆನ್ನುವ ಮನೋಭಾವ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ ಟಿ.ಕೆ.ಅನಂತಸ್ವಾಮಿ, ಪ್ರಾಂಶುಪಾಲ ಪ್ರಶಾಂತ್‌ಕುಮಾರ್, ಸಂಶೋಧಕ ಶ್ರೀವತ್ಸ ವಟಿ ಸೇರಿದಂತೆ ಇತರರಿದ್ದರು.