ಅನ್ಯಾಯ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

Develop an attitude of questioning injustice.
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಡಾ. ಸುಜಾತಾ ಚಲವಾದಿ ಅವರ ಲಚಮವ್ವ ಮತ್ತು ಇತರ ಕಥೆಗಳು ಹಾಗೂ ಅಂಬೇಡ್ಕರ್ ಅರಿವಿನ ಜತೆಗಾರ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ನಾಡೋಜ ಕುಂ. ವೀರಭದ್ರಪ್ಪ, ಎಡಿಸಿ ಸೋಮಲಿಂಗ ಗೆಣ್ಣೂರ, ಡಾ. ಸುಜಾತ ಚಲವಾದಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮನುಷ್ಯನನ್ನು ಮನುಷ್ಯರಾಗಿ ನೋಡುವ ಶಕ್ತಿಯನ್ನು ದೇಶದ ಸಂವಿಧಾನ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕಿಗೆ ಹೆಚ್ಚು ಮಹತ್ವವಿದ್ದು, ಅನ್ಯಾಯಗಳನ್ನು ಪ್ರಶ್ನಿಸದಿದ್ದರೆ ಇಡೀ ವ್ಯವಸ್ಥೆ ನಿಷ್ಕ್ರೀಯವಾಗಲಿದೆ ಎಂದು ಖ್ಯಾತ ಸಾಹಿತಿ, ಸಂಸ್ಕೃತಿ ಚಿಂತಕ ನಾಡೋಜ ಕುಂ. ವೀರಭದ್ರಪ್ಪ ಹೇಳಿದರು.

ನಗರದ ಚನ್ನಬಸಮ್ಮ ಚಂದಪ್ಪ ಪ್ರತಿಷ್ಠಾನದ ಸಮಾನ ಮನಸ್ಕರ ವೇದಿಕೆ ವತಿಯಿಂದ ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಸುಜಾತಾ ಚಲವಾದಿ ಅವರ ಲಚಮವ್ವ ಮತ್ತು ಇತರ ಕಥೆಗಳು ಹಾಗೂ ಅಂಬೇಡ್ಕರ್ ಅರಿವಿನ ಜತೆಗಾರ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಕಾಲಿನ ಸಮಸ್ಯೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಾಹಿತ್ಯ, ಕಥೆ, ಕಾವ್ಯ ಮತ್ತು ಕಾದಂಬರಿ ರಚಿಸಿ ಸಮಾಜಕ್ಕೆ ನೀಡುವ ಕಾರ್ಯವನ್ನು ಸಾಹಿತ್ಯ ವಲಯ ಮಾಡಬೇಕಿದೆ ಎಂದು ತಿಳಿಸಿದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬಹುತ್ವದ ತತ್ವ ಹಾಗೂ ಸಿದ್ಧಾಂತಗಳಡಿ ಬೆಳೆದಿವೆ. ಡಾ. ಬಿ.ಆರ್. ಅಂಬೇಡ್ಕರರು ಅನುಭವಿಸಿದ ನೋವು, ಹಸಿವು, ಬಡತನದ ಬೇಗೆಯಲ್ಲಿ ಬೆಂದು ವಿಶ್ವ ಜ್ಞಾನಿ ಎನಿಸಿಕೊಂಡರು. ಹೀಗಾಗಿಯೇ ಅಮೆರಿಕಾದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಅವರ ತೈಲವರ್ಣದ ಪ್ರತಿಮೆ ನಿರ್ಮಿಸಲಾಗಿದೆ. ಅವರು ಬರೆದ ಪುಸ್ತಕಗಳು ಸಮಾಜಕ್ಕೆ ಕಣ್ಣು ತೆರೆಸಿವೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್‌ರ ತತ್ವಗಳನ್ನು ನಾವೆಲ್ಲರೂ ಅರ್ಥ ಮಾಡಕೊಳ್ಳಬೇಕಿದೆ ಎಂದರು.

ಯುವಜನತೆ ಮೊಬೈಲ್ ವ್ಯಾಮೋಹದಿಂದ ಪುಸ್ತಕ ಓದುವ ಸಂಸ್ಕೃತಿ ಮರೆಯುತ್ತಿದ್ದಾರೆ. ಟಿವಿ ಧಾರಾವಾಹಿ ವೀಕ್ಷಣೆ ಮಹಿಳೆಯರಲ್ಲಿ ಹೆಚ್ಚಾಗಿದ್ದು, ಅದರಿಂದ ಸಾಹಿತ್ಯ ಬರವಣಿಗೆ ಮತ್ತು ಓದುವ ಅಭಿರುಚಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಬರಹಗಾರರು ಸಾಹಿತ್ಯ ಬರವಣಿಗೆ ಜತೆಗೆ ಓದುಗರಿಗೆ ತಲುಪಿಸುವ ಕಾರ್ಯ ಮಾಡಬೇಕು. ಅಲ್ಲದೆ, ಉತ್ತಮ ಅಭಿರುಚಿಯ ಸಾಹಿತ್ಯ ರಚನೆಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಮನು ಪತ್ತಾರ ಮಾತನಾಡಿ, ಸಾಹಿತಿ ಡಾ. ಸುಜಾತ ಚಲವಾದಿ ಅವರ ಬಿಡುಗಡೆಗೊಂಡ ಕೃತಿಯಲ್ಲಿ ಡಾ. ಅಂಬೇಡ್ಕರ್ ಅವರ ಬದುಕಿನ ಸಂಗತಿಗಳನ್ನು ದಾಖಲಿಸಿದ್ದಾರೆ. ಬಾಬಾ ಸಾಹೇಬರ ಅಂತರಂಗದ ವಿಚಾರಗಳನ್ನು ಬಹುತ್ವದ ನೆಲೆಯಲ್ಲಿ ಕಂಡುಕೊಂಡಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಇಂದು ವಿಶ್ವದಾದ್ಯಂತ ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಪುಸ್ತಕ ಮತ್ತು ವಿಷಯಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಅವರ ವೈಜ್ಞಾನಿಕ ನೆಲೆಯ ಚಿಂತನೆಗಳ ಕುರಿತು ಡಾ. ಸುಜಾತ ಚಲವಾದಿ ಅವರು ಸಾಹಿತ್ಯದಲ್ಲಿ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹಾಗೂ ಲೇಖಕಿ ಡಾ. ಸುಜಾತ ಚಲವಾದಿ ಮಾತನಾಡಿದರು. ಕಲಬುರಗಿಯ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ, ಸಾಹಿತಿ ಪ್ರೊ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜಶೇಖರ ಯಡಹಳ್ಳಿ, ರಮೇಶ ಆಸಂಗಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ್ ಲಂಬು, ಅನಿಲ ಹೊಸಮನಿ, ದ್ರಾಕ್ಷಾಯಣಿ ಹುಡೇದ, ಹೇಮಲತಾ ವಸ್ತದ ಮತ್ತಿತರರಿದ್ದರು.

ದಾಕ್ಷಾಯಿಣಿ ಬಿರಾದಾರ ಸ್ವಾಗತಿಸಿ ಪರಿಚಯಿಸಿದರು. ಮೋಹನ ಕಟ್ಟಿಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net