ವಿಶ್ಲೇಷಣಾತ್ಮಕ ಅಧ್ಯಯನ ರೂಢಿಸಿಕೊಳ್ಳಿ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕಾನೂನು ವಿದ್ಯಾರ್ಥಿಗಳು ವೃತ್ತಿ ಕೌಶಲ, ನಿರಂತರ ಅಧ್ಯಯನ, ಪರಿಶ್ರಮ, ಆತ್ಮಸ್ಥೈರ್ಯ, ರ್ತಾಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನವನ್ನು ರೂಢಿಸಿಕೊಂಡಾಗ ಮಾತ್ರ ಸಾಧನೆಯ ಪಥದಲ್ಲಿ ಸಾಗಬಹುದು ಎಂದು ಹೈಕೋರ್ಟ್ ಧಾರವಾಡ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಶಾಂತವೀರ ಶಿವಪ್ಪ ಹೇಳಿದರು.

ಇತ್ತೀಚೆಗೆ ಆಯೋಜಿಸಿದ್ದ ನಗರದ ಹೆಗ್ಗೇರಿಯ ಜೆಎಸ್​ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ. ಅಂಥ ಅವಕಾಶಗಳನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನ್ಯಾಯಾಲಯಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಕಲಾಪಗಳನ್ನು ವಿಕ್ಷಣೆ ಮಾಡಲೇಬೇಕು. ಇದರಿಂದ ಪ್ರಾಯೋಗಿಕ ಅನುಭವ ಉಂಟಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯು ಡಾ. ರೂಪಾ ಇಂಗಳಹಳ್ಳಿ ಮಾತನಾಡಿ, ಕಾನೂನು ಪದವಿಯನ್ನು ಕೇವಲ ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿರುವ ಹಲವಾರು ಉದಾಹರಣೆಗಳಿವೆ. ಸತತ ಪರಿಶ್ರಮದಿಂದ ವೃತ್ತಿಯಲ್ಲಿ ಉತ್ತಮ ಸ್ಥಾನಗಳನ್ನು ತಲುಪಬಹುದು ಎಂದು ಹೇಳಿದರು.

ಶಾಂತವೀರ ಶಿವಪ್ಪ ಹಾಗೂ ಪಿಎಚ್.ಡಿ ಪದವಿ ಪಡೆದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸುರೇಶ ಲಿಂಬಿಕಾಯಿ ವಾರ್ಷಿಕ ವರದಿ ಮಂಡಿಸಿದರು. ಶೋಭಾ ಜಾಬೀನ್ ಸ್ವಾಗತಿಸಿದರು. ಪೊ›. ಬಾಬುಲಾಲ ದರಗದ್, ಪ್ರೊ. ಪೂರ್ಣಿಮಾ ಕುರಡಿಕೇರಿ, ಸುರೇಶ ಲಮಾಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net