ಆರೋಗ್ಯ ಬಲವರ್ಧನೆಗೆ ಕಾರ್ಯಯೋಜನೆ ರೂಪಿಸಿ - ಕೆ.ನಾಗಣ್ಣ ಗೌಡ ಸೂಚನೆ

18 yerriswamy 03
ಬಳ್ಳಾರಿಯ ಬಿಮ್ಸ್ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಡಿಎಚ್‌ಒ ಡಾ.ವೈ.ರಮೇಶಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ಬಿಮ್ಸ್ ಪ್ರಭಾರ ನಿರ್ದೇಶಕ ಡಾ.ಕೃಷ್ಣ, ಅಧಿಕಾರಿಗಳಾದ ವಿಜಯಕುಮಾರ, ಸಕೀನಾ, ಮಲ್ಲಿಕಾರ್ಜುನ, ಸಿದ್ದಪ್ಪ ಖೈನೂರ, ಮೌನೇಶ್, ಎಳೆ ನಾಗಪ್ಪ ಇದ್ದರು.
Published on

ಬಳ್ಳಾರಿ: ಜಿಲ್ಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಬಲವರ್ಧನೆ ಹಾಗೂ ರಕ್ತಹೀನತೆ ತಡೆಗಟ್ಟಲು ಸೂಕ್ತ ಕಾರ್ಯಯೋಜನೆ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಹೇಳಿದರು.

ನಗರದ ಬಿಮ್ಸ್ ಸಭಾಂಗಣದಲ್ಲಿ ಜಿಲ್ಲಾಮಕ್ಕಳ ರಕ್ಷಣಾ ಘಟಕ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕಿದೆ. ಜಿಲ್ಲೆಯಲ್ಲಿ ವಿಶೇಷ ಅನುದಾನವೂ ಲಭ್ಯವಿದೆ. ಸೂಕ್ತ ಕಾರ್ಯಯೋಜನೆ ರೂಪಿಸಿ ಮರಣ ಪ್ರಮಾಣ ತಗ್ಗಿಸಲು ಕ್ರಮವಹಿಸಬೇಕಿದೆ. ಬಾಲ್ಯದಲ್ಲಿ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಮಿಷನ್ ವಾತ್ಸಲ್ಯ ಯೋಜನೆಯಡಿ ನೆರವು ಒದಗಿಸಬೇಕು ಎಂದರು.

ಬಾಲ್ಯವಿವಾಹ ನಡೆಯುವ ಮುನ್ನ ಶಾಲೆಯ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ತಿಳಿಯುತ್ತದೆ. ಆಗ ಸಂಬಂಧಿಸಿದ ಮನೆಗೆ ಭೇಟಿ ನೀಡಿ ಪಾಲಕರಿಗೆ ಮನವರಿಕೆ ಮಾಡಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಅಧಿಕಾರಿಗಳು ಕ್ರಮವಹಿಸಬೇಕು. ಉದಾಸೀನತೆ ತೋರುವಂತಿಲ್ಲ ಎಂದು ನಾಗಣ್ಣ ಗೌಡ ಹೇಳಿದರು.

ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ತಿಂಗಳು ಒಂದು ಬಾರಿ ಪ್ರಧಾನಮಂತ್ರಿ ಮಾತೃತ್ವ ಸುರಕ್ಷತಾ ವಂದನಾ ಕಾರ್ಯಕ್ರಮದಡಿ ಗರ್ಭಿಣಿಯರಿಗೆ ಆರೋಗ್ಯ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಡಿಎಚ್‌ಒ ಡಾ.ವೈ.ರಮೇಶಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ಬಿಮ್ಸ್ ಪ್ರಭಾರ ನಿರ್ದೇಶಕ ಡಾ.ಕೃಷ್ಣ, ಅಧಿಕಾರಿಗಳಾದ ವಿಜಯಕುಮಾರ, ಸಕೀನಾ, ಮಲ್ಲಿಕಾರ್ಜುನ, ಸಿದ್ದಪ್ಪ ಖೈನೂರ, ಮೌನೇಶ್, ಎಳೆ ನಾಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net