ಕಸ ವಿಂಗಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ, ಶಾಸಕ ವೆಂಕಟರಮಣಯ್ಯ ಸಲಹೆ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ

garbage mla
Published on

ಬೆಂಗಳೂರು ಗ್ರಾಮಾಂತರ; ಪ್ರತಿಯೊಬ್ಬರೂ ಒಣ ಹಾಗೂ ಹಸಿ ಕಸ ವಿಂಗಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸ್ವಯಂಪ್ರೇರಿತವಾಗಿ ಈ ಕೆಲಸ ಮಾಡಿದರೆ ಕಸದ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಶಾಸಕ ವೆಂಕಟರಮಣಯ್ಯ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರಲ್ಲಿ ಶುಕ್ರವಾರ ಘನತ್ಯಾಜ್ಯ ವಿಲೇವಾರಿ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ನಗರ ಪ್ರದೇಶಗಳಲ್ಲಿ ಈಗಾಗಲೇ ಕಸ ವಿಲೇವಾರಿ ಸಮಸ್ಯೆಕಾಣಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲೂ ಮುಂದಿನ ದಿನಗಳಲ್ಲಿ ಸಮಸ್ಯೆ ಉದ್ಭವವಾಗಬಹುದು. ಈ ನಿಟ್ಟಿನಲ್ಲಿ ಈಗಲೆ ಸಾರ್ವಜನಿಕರು ಎಚ್ಚೆತ್ತುಕೊಂಡು ಕಸ ನಿರ್ವಹಣೆಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಹಂತಹಂತವಾಗಿ ಘಟಕಗಳು ನಿರ್ಮಾಣಗೊಳ್ಳಲಿವೆ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಸ್ವಚ್ಛವಾಗಿದ್ದರಷ್ಟೆ ಸಾಂಕ್ರಾಮಿಕ ರೋಗಗಳಿಂದ ಮುಕ್ತಿಹೊಂದಲು ಸಾಧ್ಯ. ಈ ಬಗ್ಗೆ ಪ್ರತಿ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಎಂದರು.

ಇದೇ ವೇಳೆ ಒಣಕಸ ಸಂಗ್ರಹಣೆಗಾಗಿ ಬಕೆಟ್ ವಿತರಿಸಲಾಯಿತು. ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವುದು, ಉತ್ತಮವಾಗಿ ಕಸ ನಿರ್ವಹಣೆಗೆ ಎಲ್ಲರೂ ಬದ್ದರಾಗಿದ್ದೇವೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ದೊಡ್ಡತುಮಕೂರು ಗ್ರಾಪಂ ಸದಸ್ಯರಾದ ಟಿ.ಎ.ರವಿಕುಮಾರ್, ಟಿ.ಜಿ.ಮಂಜುನಾಥ್, ವೀಣಾ ಲೋಕೇಶ್, ರೇಣುಕಾ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net