

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಶಾರೀರಿಕವಾಗಿ ಸದೃಢರಾಗಲು ನಿತ್ಯ ವ್ಯಾಯಾಮ ಮಾಡಬೇಕು. ಇದರ ಜತೆಗೆ ಉತ್ತಮ ಸಂಸ್ಕಾರ ಪಡೆದು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.
ತಾಲೂಕಿನ ನರೇಂದ್ರ ಗ್ರಾಮದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ತಾಲೂಕ ಸಮಿತಿ, ನಾಸು ಹರ್ಡೀಕರ್ ಖಾಸಗಿ ಶಾಖೆ, ನರೇಂದ್ರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಮಕ್ಕಳ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಬೆಳೆಸುವಲ್ಲಿ ಸೇವಾದಳ ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳ ಮೇಳವನ್ನು ಅತ್ಯಂತ ಅದ್ಧೂರಿಯಾಗಿ ಸಂಘಟನೆ ಮಾಡಲಾಗಿದೆ. ಸೇವಾದಳ ನರೇಂದ್ರ ಶಾಖೆಯ ಎಲ್ಲ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದರು.
ಚಂದ್ರಶೇಖರ ಮಾತನಾಡಿ, ಭಾರತ ಸೇವಾದಳ ಮಕ್ಕಳಲ್ಲಿ ಶಿಸ್ತು, ಸಂಸ್ಕಾರ, ಸೇವಾ ಮನೋಭಾವ ಬೆಳೆಸುತ್ತದೆ. ನರೇಂದ್ರದ ಸೇವಾದಳ ಖಾಸಗಿ ಶಾಖೆಯು ರಾಜ್ಯ ಮಟ್ಟದ ಉತ್ತಮ ಶಾಖೆ ಪ್ರಶಸ್ತಿಗೆ ಭಾಜನವಾಗಿರುವುದು ಪ್ರಶಂಸನೀಯ ಎಂದರು.
ಮಂಜುನಾಥ್ ಜಾವೂರ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳ ತಾಲೂಕು ಸಮಿತಿ ಅಧ್ಯಕ್ಷ ಮಂಜುನಾಥ ತಿರ್ಲಾಪುರ, ಮಾಜಿ ದಳಪತಿಗಳಾದ ಹಟ್ಟಿ ಗೌಡರ್, ದಳಪತಿ ಕಾಶಿನಾಥ್, ಪ್ರಕಾಶ ಗೋಣಿ, ಸುರೇಶ ಕಾಟ್ಕರ, ಕರಿಯಪ್ಪ ಮಾದರ, ಪ್ರಶಾಂತ ಕೇಕರೆ, ಗ್ರಾಮದ ಹಿರಿಯರು, ಎಸ್ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು, ಇತರರು ಇದ್ದರು.
ಭಾರತ ಸೇವಾದಳದ ಪಟುಗಳು ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಪರೇಡ್, ಲೇಜಿಮ್, ನೃತ್ಯ, ಕವಾಯತು ನಡೆಸಲಾಯಿತು. ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸತೀಶ ವಗ್ಗನವರು ನಿರೂಪಿಸಿದರು.