ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ

Develop a scientific attitude in students
ರಾಂಪುರ ಎಂ. ಪಿ. ಬಿಳ್ಳೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ, ಗಣಿತ ವಸ್ತು ಪ್ರದರ್ಶನ ಹಾಗೂ ಪುಸ್ತಕ ಮೇಳವನ್ನು ಜಮಖಂಡಿ ಬಿಇಒ ಎ.ಕೆ. ಬಸವಣ್ಣವರ ಉದ್ಘಾಟಿಸಿದರು. ಸಂಗಮೇಶ ವಿಜಾಪುರ, ಶ್ರೀಶೈಲ ಬುರ್ಲಿ, ಪರಶುರಾಮ ಜಮಾದಾರ್, ಅಪ್ಪಾಸಾಬ ತುಬಚಿ ಮತ್ತಿತರರಿದ್ದಾರೆ.
Published on

ರಬಕವಿ-ಬನಹಟ್ಟಿ: ವಿದ್ಯಾರ್ಥಿಗಳು ಮೂಢನಂಬಿಕೆಗಳಿಂದ ಹೊರಬಂದು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವೈಚಾರಿಕತೆಯಿಂದ ಮಾತ್ರ ಬದುಕು ಆದರ್ಶಮಯವಾಗುತ್ತದೆ ಎಂದು ಜಮಖಂಡಿ ಬಿಇಒ ಎ.ಕೆ. ಬಸಣ್ಣವರ ಹೇಳಿದರು.

ರಾಂಪುರದ ಎಂ.ಪಿ. ಬಿಳ್ಳೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ, ಗಣಿತ ವಸ್ತು ಪ್ರದರ್ಶನ ಹಾಗೂ ಪುಸ್ತಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ನಮ್ಮ ಬದುಕಿನ ಎಲ್ಲ ಆಯಾಮಗಳನ್ನು ವಿಜ್ಞಾನ ಆವರಿಸಿಕೊಂಡಿದೆ. ಅದನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಸರ್ಕಾರಿ ಶಾಲೆಯಲ್ಲಿ ಮೇಳ ಆಯೋಜನೆ ಮಾಡಿ ಮಕ್ಕಳ ಆಸಕ್ತಿ, ಕುತೂಹಲವನ್ನು ಪ್ರೋತ್ಸಾಹಿಸುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಕ ಶ್ರೀಶೈಲ ಬುರ್ಲಿ ಮಾತನಾಡಿ, ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಮೇಳ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದ ಆವಿಷ್ಕಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂದರು.

ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಸಂಗಮೇಶ ವಿಜಾಪುರ, ಮಕ್ಕಳಿಗೆ ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳು ರಂಗೋಲಿಯಲ್ಲಿ ವಿಜ್ಞಾನದ ಆಕೃತಿಗಳನ್ನು ರಚಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗಣಿತ ಮೇಳವನ್ನು ಶಿಕ್ಷಕ ನಜೀರ್ ಆರ್. ಹಾಗೂ ವಿಜ್ಞಾನ ಮೇಳವನ್ನು ಶಿಕ್ಷಕಿ ಮಂಗಲ ಬಕರೆ ಸಂಘಟಿಸಿದ್ದರು. ಪುಸ್ತಕ ಪ್ರದರ್ಶನವನ್ನು ಕನ್ನಡ ಶಿಕ್ಷಕಿ ಗೀತಾ ಕೀರಪೂರ ಆಯೋಜಿಸಿದ್ದರು. ದೈಹಿಕ ಶಿಕ್ಷಕ ಪರಶುರಾಮ ಜಮಾದಾರ್, ಹಿಂದಿ ಶಿಕ್ಷಕ ಅಪ್ಪಾಸಾಬ ತುಬಚಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net