

ತಾವರಗೇರಾ: ದೇಶದ ಪ್ರಗತಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದರ ಮೂಲಕ ಬದ್ಧತೆ ಬೆಳೆಸಿಕೊಳ್ಳೋಣ ಎಂದು ಸಂಪನ್ಮೂಲ ವ್ಯಕ್ತಿ ಭೀಮಸೇನ್ ಕುಲಕರ್ಣಿ ಹೇಳಿದರು.
ಇದನ್ನೂ ಓದಿ:ಮಕ್ಕಳಲ್ಲಿ ಕೌತುಕ ಹೆಚ್ಚಿಸಿದ ವಿಜ್ಞಾನ ಕಲಿಕೋಪಕರಣ
ಸಮೀಪದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಮತ್ತು ಉತ್ಸಾಹ ಬೆಳೆಸಿಕೊಳ್ಳಿ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ರಂಗೋಲಿ, ಮೆಹಂದಿ, ನಾಟಕ ಹಾಗೂ ವಸ್ತುಪ್ರದರ್ಶನ ಆಯೋಜಿಸಬೇಕು ಎಂದು ತಿಳಿದರು.
ಪ್ರಾಚಾರ್ಯ ಗುರುಪಾದಗೌಡ ಸೂಡಿ ಮಾತನಾಡಿ, ಸರ್ಕಾರ ಕಡ್ಡಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಿ ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ ವಿದ್ಯಾವಂತರು ಜ್ಞಾನವಂತರಾಗದೇ ಸಮಾಜದ ಮೌಢ್ಯಕ್ಕೆ ಜೋತುಬಿದ್ದಿರುವುದು ದೇಶದ ಪ್ರಗತಿಗೆ ಮಾರಕ ಎಂದರು.
ಶಿಕ್ಷಕರಾದ ರಂಗನಾಥ ಮೇಟಿ, ಜನಾರ್ದನ ಕೊಳ್ಳಿ, ನರಸಿಂಗಪ್ಪ ಪೊಲೀಸ್ ಪಾಟೀಲ್, ಅಮರೇಗೌಡ ಮಾಲಿಪಾಟೀಲ್, ನಿಲಯ ಪಾಲಕರಾದ ಮಹಾಂತೇಶ ಗುಜ್ಜಲ್ಲ, ಬಸವರಾಜ ಬಾರಕೇರ, ಆದೇಶ, ಮುತ್ತಮ್ಮ, ಸಂಗಮೇಶ, ಪ್ರವೀಣ ಇತರರಿದ್ದರು.