ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ

6blrp4
ಬೇಲೂರು ತಾಲೂಕಿನ ಇಬ್ಬೀಡು ಯಲಹಂಕದ ಶ್ರೀ ಶಿವನಂಜುಂಡೇಶ್ವರ ಪ್ರೌಢಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಸಮಿತಿಯಿಂದ ವೈಜ್ಞಾನಿಕ ಬೆಳವಣಿಗೆ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
Published on

ಕರ್ನಾಟಕ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಮಾ.ನಾ.ಮಂಜೇಗೌಡ ಸಲಹೆ

ಬೇಲೂರು : ಪ್ರತಿಯೊಬ್ಬ ಮಕ್ಕಳಲ್ಲೂ ವೈಜ್ಞಾನಿಕ ಮನೋಭಾವ ಹಾಗೂ ಪರಿಸರ ಕಾಳಜಿ ಮೂಡಿಸಲು ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರ್ನಾಟಕ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಮಾ.ನಾ.ಮಂಜೇಗೌಡ ಹೇಳಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ತಾಲೂಕಿನ ಇಬ್ಬೀಡು ಯಲಹಂಕದ ಶ್ರೀ ಶಿವನಂಜುಂಡೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಆಕಾಶ ಕಾಯಗಳ ಬಗೆಗಿನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದರೊಂದಿಗೆ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಜತೆಗೆ ಪರಿಸರ ಕಾಳಜಿಯನ್ನು ಬೆಳೆಸುವುದಲ್ಲದೆ, ಜಲ, ವಾಯುಮಾಲಿನ್ಯದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ತಿಳಿಸುವುದು ಅತ್ಯವಶ್ಯಕವಾಗಿದೆ. ಆಕಾಶದಲ್ಲಿರುವ ಗ್ರಹ ನಕ್ಷತ್ರಗಳು ಅಮಾವಾಸ್ಯೆ, ಹುಣ್ಣಿಮೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಏನೆಲ್ಲ ತಿಳಿಯುತ್ತದೆ ಎಂಬುದನ್ನು ಅರ್ಥ ಮಾಡಿಸಬೇಕಿದೆ ಎಂದರು.

ಕರ್ನಾಟಕ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಟಿ.ಡಿ.ತಮಣ್ಣಗೌಡ, ಗ್ರಹಣ ಏಕೆ ಹೇಗೆ ಸಂಭವಿಸುತ್ತವೆ ಅದರ ಪರಿಣಾಮಗಳು ಹಾಗೂ ಗ್ರಹಗತಿ ನಿಜವೇ ಗ್ರಹ ದೋಷ ಮುಂತಾದ ವೈಜ್ಞಾನಿಕ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ನಕ್ಷತ್ರ ರಾಶಿ ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲ, ಗುದ್ದಿ ನಕ್ಷತ್ರ, ಶುಕ್ರಗ್ರಹ, ಗುರುಗ್ರಹ, ಮಂಗಳ ಗ್ರಹಗಳ ಸಂಕ್ಷಿಪ್ತ ಪರಿಚಯ ಮಾಡಿದರು. ಅಲ್ಲದೆ ನಕ್ಷತ್ರ ಪುಂಜಗಳಾದ ಮಹಾವ್ಯಾದ ನಕ್ಷತ್ರ, ವೃಷಭರಾಶಿ, ಮಿಥುನ ರಾಶಿ ಮುಂತಾದವುಗಳ ವೀಕ್ಷಣೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಮಕ್ಕಳು ಶಾಲಾ ದಿನಗಳಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಶ್ರೀ ಶಿವನಂಜುಂಡೇಶ್ವರ ಶಾಲಾ ಮುಖ್ಯಶಿಕ್ಷಕ ಪ್ರಕಾಶ್, ಯಾವುದೇ ರಾಹುಕಾಲ, ಗುಳಿಕಾಲ, ಯಮಗಂಡಕಾಲಗಳನ್ನು ಪರಿಗಣಿಸದೆ ತಮ್ಮ ಮಕ್ಕಳ ಮದುವೆ ಮಾಡಿರುವುದಾಗಿ ತಿಳಿಸಿದ್ದಲ್ಲದೆ, ವಿದ್ಯಾರ್ಥಿಗಳು ಇಂತಹ ವೈಜ್ಞಾನಿಕ ಮನೋಭಾವ ಮೂಡಿಸುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಂತಸದ ವಿಚಾರ. ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯವರು ಮಕ್ಕಳಿಗೆ ವೈಜ್ಞಾನಿಕವಾಗಿ ಹೆಚ್ಚು ತಿಳಿಸುವ ಕೆಲಸ ಮಾಡಲಿ ಎಂದರು.

ಶಾಲೆಯ ಸಹ ಶಿಕ್ಷಕ ನಾಗರಾಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net