ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ

25 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾಮಿ ವಿವೇಕಾನಂದರು ಪ್ರಪಂಚಕ್ಕೆ ಸ್ಫೂರ್ತಿದಾಯಕರಾದರು. ವಿದ್ಯೆ ಮಾನವನಿಗೆ ಮುಖ್ಯ ಎಂದು ತಿಳಿಸಿದ ಶ್ರೇಷ್ಠ ವ್ಯಕ್ತಿ. ಮಾನವ ಪರಿಸರದೊಂದಿಗೆ ಬೆರೆತು ಜ್ಞಾನ ಹೆಚ್ಚಿಸಿಕೊಳ್ಳುತ್ತಾನೆ. ಪ್ರಶ್ನೆಗಳನ್ನು ಮಾಡುತ್ತಾ ವಿಜ್ಞಾನದ ಕಡೆಗೆ ಸಾಗುತ್ತಿದ್ದಾನೆ. ಮಕ್ಕಳಲ್ಲಿ ವೈಚಾರಿಕ ಮನೋಭಾವ ಮೂಡಬೇಕು ಎಂದು ಐಐಐಟಿ ನಿರ್ದೇಶಕ ಪ್ರೊ. ಮಹದೇವ ಪ್ರಸನ್ನ ಹೇಳಿದರು.
ನಗರದ ಸ್ವಾಮಿ ವಿವೇಕಾನಂದರ ಯೂತ್​ ಮೂವ್​ಮೆಂಟ್​ ವತಿಯಿಂದ ಇಲ್ಲಿನ ರಾಯಾಪುರ ಎಸ್​ಕೆಡಿಆರ್​ಡಿಪಿ ಆವರಣದಲ್ಲಿ ಏರ್ಪಡಿಸಿರುವ 2 ದಿನಗಳ "ಅನ್ವೇಷಣೆ' ಮಕ್ಕಳ ವಸತಿ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ವೈಜ್ಞಾನಿಕ ಮನೋಭಾವನೆ ಹೆಚ್ಚಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು. ಸ್ವಾಮಿ ವಿವೇಕಾನಂದರಂತೆ ಸರಳ ವ್ಯಕ್ತಿತ್ವ ಬೆಳೆಸಿಕೊಳ್ಳಿ. ಪ್ರತಿಭಾವಂತರಾಗಿ ಸಾಮಾಜಿಕವಾಗಿ ಕೆಲಸ ಮಾಡಬೇಕು. ನಾವೆಲ್ಲ ವಿದ್ಯೆ ಕಲಿತು ಉತ್ತಮ ಪ್ರಜೆಗಳಾಗಿ ಸಮಾಜಮುಖಿ ಕೆಲಸ ಮಾಡುವುದೇ ಸಾರ್ಥಕ ಜೀವನ ಎಂದರು.
ಹಾವೇರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕ ಗಿರೀಶ ಪದಕಿ ಮಾತನಾಡಿ, ಸಂಸ್ಥೆಯು ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳನ್ನು ಹುಡುಕಿ ಅವಕಾಶ ಒದಗಿಸುತ್ತಿರುವ ಕಾರ್ಯ ಶ್ಲಾನೀಯ. ಸುಸ್ಥಿರ ಅಭಿವೃದ್ಧಿಗೆ ಸಾಮಾನ್ಯ ಶಿಕ್ಷಣಕ್ಕಿಂತ ತಂತ್ರಜ್ಞಾನ ಶಿಕ್ಷಣ ಅವಶ್ಯಕ. ಸಾಧನೆ ಒಂದೇ ರಂಗಕ್ಕೆ ಸೀಮಿತವಾಗದಿರಲಿ. ಪಾಲಕರು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಪ್ರವಿಣಕುಮಾರ ಎಸ್​.ಮಾತನಾಡಿದರು. ಡಾ. ಗೋಪಾಲಕೃಷ್ಣ ಕಮಲಾಪುರ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಂದ ಎರಡನೇ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 10ನೇ ತರಗತಿಯ 129 ಮಕ್ಕಳು ಹಾಗೂ 80ಕ್ಕೂ ಹೆಚ್ಚು ಪಾಲಕರು ಪಾಲ್ಗೊಂಡಿದ್ದಾರೆ.
ರಘೋತ್ತಮ ಜೋಶಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net