

ವಿಜಯವಾಣಿ ಸುದ್ದಿಜಾಲ ಧಾರವಾಡ
ತಂತ್ರಜ್ಞಾನ, ಮಾಹಿತಿ ಮತ್ತು ತಿಳಿವಳಿಕೆ ಇದ್ದಾಗ ಮಾತ್ರ ಇಂದಿನ ಜಗತ್ತಿನಲ್ಲಿ ಬದುಕಲು ಸಾಧ್ಯ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ ಹೇಳಿದರು.
ನಗರದ ಸುವರ್ಣ ಎಜುಕೇಷನ್ ಟ್ರಸ್ಟ್ನ ಸುವರ್ಣ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಕಿಯೋನಿಕ್ಸ್ ಫ್ರ್ಯಾಂಚೈಸಿ ಮತ್ತು ಸುವರ್ಣ ಕಲಾ ಹಾಗೂ ವಾಣಿಜ್ಯ ಕಾಲೇಜು ವತಿಯಿಂದ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊಬೈಲ್ನಿಂದಲೇ ಎಲ್ಲ ಜ್ಞಾನ ಸಿಗಲಿದೆ ಎಂಬ ತಿಳಿವಳಿಕೆ ಸರಿಯಲ್ಲ. ಉತ್ತಮ ಪುಸ್ತಕಗಳು ನಮ್ಮನ್ನು ಜ್ಞಾನವಂತರನ್ನಾಗಿ ಮಾಡುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸದಾ ಧನಾತ್ಮಕ ಚಿಂತನೆಯ ಜತೆಗೆ ಜೀವನದ ಏಳು ಬೀಳುಗಳನ್ನು ಮೀರಿ ನಮ್ಮ ಗುರಿ ತಲುಪಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಸುವರ್ಣ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಸವಿತಾ ಅಮರಶೆಟ್ಟಿ ಮಾತನಾಡಿ, ಸುವರ್ಣ ಕಂಪ್ಯೂಟರ್ 22 ವರ್ಷಗಳಿಂದ ಶಿಕ್ಷಣ ನೀಡುತ್ತಾ ಬಂದಿದ್ದು, ಸಾವಿರಾರು ವಿದ್ಯಾರ್ಥಿಗಳು ಈ ಶಿಕ್ಷಣದಿಂದ ಉದ್ಯೋಗ ಪಡೆದು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ ಎಂದರು.
ಗ್ರಂಥಪಾಲಕ ಡಾ. ಸಂತೋಷ ಚವ್ಹಾಣ ಮಾತನಾಡಿದರು. ಸುವರ್ಣ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಅಮರಶೆಟ್ಟಿ, ಸುವರ್ಣ ಕಂಪ್ಯೂಟರ್ ಎಜುಕೇಷನ್ ಸೆಂಟರ್ನ ಪ್ರಿಯಾ ಅಂಗಡಿ, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಇತರರು ಇದ್ದರು.
ಯಶೋಧಾ ಪಾಟೀಲ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಸದ್ಗುರು ಹೆಳವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ಮಲಾ ಗುರವ ನಿರೂಪಿಸಿದರು. ಎನ್.ಎಸ್ ಸಾಲಿಮಠ ವಂದಿಸಿದರು.