ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ

2 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪತ್ರಿಕಾ ಕ್ಷೇತ್ರ ಇಂದು ಕವಲು ದಾರಿಯಲ್ಲಿರುವುದರ ಜತೆಗೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂಕ್ರಮಣ ಕಾಲದಲ್ಲಿ ಯುವ ಸಮೂಹ ಪತ್ರಿಕೆಗಳನ್ನು ಓದುವ ಸಂಸ್ಕೃತಿ ಬೆಳೆಸಿಕೊಳ್ಳಲಿ ಎಂದು ವಿಶ್ರಾಂತ ವಿಶೇಷ ಜಿಲ್ಲಾಧಿಕಾರಿ ವ್ಯಾಸ ದೇಶಪಾಂಡೆ ಆಶಯ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶಿವಮೊಗ್ಗದ ಮಿಂಚು ಶ್ರೀನಿವಾಸ ಕುಟುಂಬ, ಧಾರವಾಡದ ಸಾಕಾರ -ಸಾಂಸ್ಕೃತಿಕ ಹಾಗೂ ಮಾಧ್ಯಮ ಪ್ರತಿಷ್ಠಾನಗಳ ವತಿಯಿಂದ ಆಯೋಜಿಸಿದ್ದ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬದಲಾದ ಹಾಗೂ ಬದಲಾಗುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಭಾಷೆ, ಸಾಹಿತ್ಯ ಹಾಗೂ ರಂಗಭೂಮಿಯ ಭಾಷೆಯೂ ಬದಲಾಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಮಷ್ಟಿ ಚಿಂತನೆಗಳು ನಡೆಯಬೇಕು. ಹಿರಿಯ ಪತ್ರಕರ್ತರಾದ ಖಾದ್ರಿ ಶಾಮಣ್ಣ, ಟಿ. ಎಸ್​. ರಾಮಚಂದ್ರರಾವ್​ ಸೇರಿ ಆ ತಲೆಮಾರಿನ ಪತ್ರಕರ್ತರು ಬಳಸುತ್ತಿದ್ದ ಭಾಷೆಗೂ, ಆನಂತರ ಬಂದ ಲಂಕೇಶ, ರವಿ ಬೆಳಗೆರೆ ಬಳಸುತ್ತಿದ್ದ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೆಯೇ ಸಾಹಿತ್ಯ, ರಂಗಭೂಮಿಯ ಪರಿಭಾಷೆ ಸಹ ಬದಲಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಈ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಲೇ ಈ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಬೇಕಿದೆ ಎಂದರು.

ಗದಗನ ನವೋದಯ ಪ್ರಾದೇಶಿಕ ಪತ್ರಿಕೆ ಸಂಪಾದಕ ರಾಜೀವ ಕಿದಿಯೂರು, ಚಿಕ್ಕಮಗಳೂರಿನ ಜನಮಿತ್ರ ಪತ್ರಿಕೆ ಸಂಪಾದಕ ಎಸ್​. ಗಿರಿಜಾ ಶಂಕರ್​ ಅವರಿಗೆ ಮಿಂಚು ಶ್ರೀನಿವಾಸ ಪ್ರಶಸ್ತಿ, ವಿದುಷಿ ಸುಮಂಗಲಾ ರತ್ನಾಕರ್​ ಅವರಿಗೆ ಸಿ.ಆರ್​. ಭಟ್​ ಹೆಸರಿನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ, ಪತ್ರಿಕೋದ್ಯಮ ವಿಭಾಗದ ಶೈಕ್ಷಣಿಕ ವರ್ಷದಲ್ಲಿ 9 ಚಿನ್ನದ ಪದಕ ಪಡೆದ ದಾದಾಗೌಡ ಪಾಟೀಲ ಅವರಿಗೆ ದತ್ತಾತ್ರೇಯ ಕುಲಕರ್ಣಿ ಹೆಸರಿನಲ್ಲಿ ಶಿಕ್ಷಣ ಸಿರಿ ಪ್ರಶಸ್ತಿ ಹಾಗೂ ಮಂಜುನಾಥ ಹೆಗಡೆ ಅವರಿಗೆ ಎಂ. ಎಲ್​. ಜೋಷಿ ಹೆಸರಿನಲ್ಲಿ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಿವಮೊಗ್ಗ ಪ್ರೆಸ್​ ಟ್ರಸ್ಟ್​ ಅಧ್ಯಕ್ಷ ಎನ್​. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನ ಎನ್​. ಹಡಗಲಿ, ಡಾ. ಶುಭದಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net