

ಹೊಳೆನರಸೀಪುರ : ನಾಗರಿಕರಿಗೆ ಒಂದು ಲಕ್ಷ ರೂ. ನೀಡುವುದಾಗಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಹೇಳ್ತಾರೆ. ಇವರೇನು ಮುಖ್ಯಮಂತ್ರಿಯೇ, ಪ್ರಧಾನಿಯೇ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಾಗ್ದಾಳಿ ನಡೆಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಪತ್ರ ಪ್ರದರ್ಶನ ಮಾಡಿದ ಅವರು, ಕಾಂಗ್ರೆಸ್ ಮುಖಂಡರು ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಕೇರಳ, ತಮಿಳುನಾಡು ರಾಜ್ಯದಲ್ಲಿ ಇಲ್ಲದ ಭರವಸೆ ಇಲ್ಲೇಕೆ ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ‘ನಾನು ಸತ್ತರೆ ಮಣ್ಣಾದರೂ ಹಾಕಿ’ ಎಂದು ಕಲಬುರಗಿಯಲ್ಲಿ ಹೇಳಿದ್ದಾರೆ. ಅವರು ಅಷ್ಟು ಆವೇಶದಲ್ಲಿ ಮತ ಕೇಳಬಾರದು. ರಾಹುಲ್ ಎಂಬ ಮಹಾನುಭಾವ ಉತ್ತರ ಪ್ರದೇಶದಲ್ಲಿ ನಿಲ್ಲಲು ಆಗದೆ ಕೇರಳಕ್ಕೆ ಬಂದು ಅಭ್ಯರ್ಥಿ ಆಗಿದ್ದಾರೆ ಎಂದು ಟೀಕಿಸಿದರು.
ಸೋಲುತ್ತೇವೆ ಎಂಬುದು ಗೊತ್ತಾಗಿದೆ: ರಾಜ್ಯದಲ್ಲಿ ಕಾಂಗ್ರೆಸ್‌ನವರಿಗೆ ಸೋಲುತ್ತೇವೆ ಎಂಬುದು ಗೊತ್ತಾಗಿದೆ. ಹಾಗಾಗಿ ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ ಹಂಚಿದ್ದಾರೆ ಎಂದು ದೂರಿದರು.
ಪಡವಲಹಿಪ್ಪೆಯಲ್ಲಿ ದೇವೇಗೌಡ ಮತದಾನ
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ಸಮೇತ ಪಡವಲಹಿಪ್ಪೆಯ ಮತಗಟ್ಟೆ ಸಂಖ್ಯೆ 251ರಲ್ಲಿ ಶುಕ್ರವಾರ ಹಕ್ಕು ಚಲಾವಣೆ ಮಾಡಿದರು. ಗ್ರಾಮದ ಕೋದಂಡರಾಮೇಶ್ವರ, ಪರಮೇಶ್ವರಸ್ವಾಮಿ ದೇವಾಲಯಕ್ಕೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಚಲಾಯಿಸಿದರು. ನಾನು ಮತ್ತು ಚನ್ನಮ್ಮ ಮತ ಹಾಕಿದ್ದೇವೆ. 1962ರಿಂದ ಇಲ್ಲಿಗೆ ಬಂದು ವಾಸವಾಗಿದ್ದೇನೆ. ಇಲ್ಲಿ ನಮ್ಮ ಜಮೀನು, ತೆಂಗಿನ ತೋಟ ಇದೆ. ಮತ ಹಾಕಲು ಇಲ್ಲಿಗೆ ಬರುತ್ತೇವೆ ಎಂದು ಹೇಳಿದರು.