

ಕೆ.ಆರ್.ನಗರ: ಬಡವರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಮುಖ್ಯಮಂತ್ರಿಗಳಲ್ಲಿ ಡಿ.ದೇವರಾಜ ಅರಸು ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಕಾಳೇನಹಳ್ಳಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಡಿ.ದೇವರಾಜ ಅರಸು ಭವನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಸಮಾಜದಲ್ಲಿದ್ದ ಜೀತಪದ್ಧತಿ ನಿಷೇಧ, ಉಳುವವನೆ ಭೂಮಿಯ ಒಡೆಯ ಎಂಬ ಕಾನೂನಿನು ಜಾರಿ ಮಾಡುವ ಮೂಲಕ ರೈತರ, ಶೋಷಿತರ ಪಾಲಿನ ದೇವರಂತಾದರು. ಹಿಂದುಳಿದ ವರ್ಗಗಳ ಯುವಕರನ್ನು ಗುರುತಿಸಿ ರಾಜಕೀಯಕ್ಕೆ ಕರೆತಂದು ಅವರನ್ನು ಬೆಳೆಸುವ ಮೂಲಕ ಸಾವಿರಾರು ಜನರಿಗೆ ರಾಜಕೀಯ ಗುರುವಾದರು ಎಂದು ತಿಳಿಸಿದರು.
ದೇಶದ ಅಭಿವೃದ್ಧಿಗೆ ಯುವ ಸಮೂಹದ ಪಾತ್ರ ಪ್ರಮುಖ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಹಾಸ್ಟೆಲ್‌ಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದಕ್ಕೆ ಇಲಾಖೆ ಅಧಿಕಾರಿಗಳು, ವಸತಿ ನಿಲಯದ ಸಿಬ್ಬಂದಿ ಶ್ರಮ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಸಿಎಂ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಶಾಸಕ ಡಿ.ರವಿಶಂಕರ್ ಬಹುಮಾನ ವಿತರಿಸಿದರು. ತಹಸೀಲ್ದಾರ್ ಸುರೇಂದ್ರಮೂರ್ತಿ, ಬಿಸಿಎಂ ಜಿಲ್ಲಾಧಿಕಾರಿ ರಾಘವೇಂದ್ರ, ತಾಲೂಕು ಅಧಿಕಾರಿ ಚಂದ್ರಕಲಾ, ಪುರಸಭಾ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸದಸ್ಯರಾದ ನಟರಾಜ್, ಮಿಕ್ಸರ್‌ಶಂಕರ್, ಶಿವುನಾಯಕ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ನಿರ್ದೇಶಕರಾದ ಪ್ರಸನ್ನಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜ್, ಸರ್ವೋದಯ ರೈತ ಸಂಘದ ಅಧ್ಯಕ್ಷ ಗರುಡಗಂಭ ಸ್ವಾಮಿ, ಬಿಸಿಎಂ ಇಲಾಖೆಯ ವಾರ್ಡನ್‌ಗಳಾದ ಜಿ.ಜೆ.ಮಹೇಶ್, ಎಸ್.ಎಸ್.ಮಧುಸೂದನ್, ಲೋಕೇಶ್, ಗೀತಾ ಇದ್ದರು.