ಸಿಎಂ ಮನೆ ಬಳಿಯ ಧರಣಿ ಹಿಂಪಡೆದ ದೇವೇಗೌಡ

H D Devegowda
Published on

ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾ ಮುಂದೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ನಾಳೆ (ಜೂ.29) ನಡೆಸಲಿದ್ದ ಧರಣಿ ಸತ್ಯಾಗ್ರಹವನ್ನು ವಾಪಸ್​ ಪಡೆದಿದ್ದಾರೆ.

'ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಲ್ಲು ಕ್ರಷರ್ ವಿಚಾರವಾಗಿ ಜಿಪಂ ಜೆಡಿಎಸ್​ ಸದಸ್ಯ ಎಚ್.ಟಿ. ಮಂಜುಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಸಿಎಂ ಗೃಹಕಚೇರಿ ಕೃಷ್ಣಾ ಮುಂದೆ ಧರಣಿ ಕೂರುತ್ತೇನೆ’ ಎಂದು ಸಿಎಂ ಬಿಎಸ್​ವೈಗೆ ದೇವೇಗೌಡರು 7 ಪುಟಗಳ ಪತ್ರ ಬರೆದು ಎಚ್ಚರಿಸಿದ್ದರು. ಈಗ ಈ ಧರಣಿಯನ್ನು ವಾಪಸ್​ ಪಡೆದಿರುವುದಾಗಿ ಟ್ವೀಟ್​ ಮೂಲಕ ದೇವೇಗೌಡರು ತಿಳಿಸಿದ್ದಾರೆ. ಇದನ್ನೂ ಓದಿರಿ ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಮಂಡ್ಯ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಕುರಿತ ನಮ್ಮ ಬೇಡಿಕೆ, ಸಮಸ್ಯೆ ಬಗೆಹರಿಸಲು ಸಿಎಂ ಯಡಿಯೂರಪ್ಪ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರು ಭಾಗಶಃ ಒಪ್ಪಿರುತ್ತಾರೆ. ಈ ಹಿನ್ನೆಲೆಯಲ್ಲಿ ಜೂ.29ರಂದು ಮುಖ್ಯಮಂತ್ರಿ ನಿವಾಸದ ಮುಂದೆ ನಾವು ಹಮ್ಮಿಕೊಳ್ಳಬೇಕಿದ್ದ ಧರಣಿಯನ್ನು ಹಿಂಪಡೆದಿದ್ದೇವೆ ಎಂದು ಎಚ್​.ಡಿ. ದೇವೇಗೌಡರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಸಿಎಂಗೆ ದೇವೇಗೌಡರು ಪತ್ರದಲ್ಲಿ 'ಉಸ್ತುವಾರಿ ಸಚಿವ ನಾರಾಯಣಗೌಡರ ಕಿರುಕುಳದ ಬಗ್ಗೆ ದೂರು ನೀಡಲು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್​ ಅವರ ಗಮನಕ್ಕೆ ತರಲು ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಜಿಲ್ಲಾಧಿಕಾರಿಯೂ ಉದ್ದಟತನ ತೋರಿದ್ದಾರೆ’ ಎಂದು ಆರೋಪಿಸಿದ್ದರು. ಸದ್ಯ ಅಲ್ಲಿನ ಸಮಸ್ಯೆ ಇತ್ಯರ್ಥಕ್ಕೆ ಸಿಎಂ ಒಪ್ಪಿದ್ದು ದೇವೇಗೌಡರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net