ದೇವೇಗೌಡರು ಸಾಲು ಸಾಲು ಒಕ್ಕಲಿಗರನ್ನು ಮುಗಿಸಿದ್ದಾರೆ: CM Siddaramaiah ವಾಗ್ದಾಳಿ

CM Siddaramaiah
Published on

ರಾಮನಗರ: ದೇವೇಗೌಡರು ಮತ್ತು ಕುಮಾರಸ್ವಾಮಿ, ಒಬ್ಬೇ ಒಬ್ಬ ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ. ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸ್ತಾರೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದ ದೊಡ್ಡ ಮಳೂರಿನಲ್ಲಿ ಸೋಮವಾರ (ನ.11) ನಡೆದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ಮುಗಿಸಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ ಎಂದರು.

ಬುದ್ದವಂತ ಒಕ್ಕಲಿಗರು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸ್ತಾರೆ. ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪಯತ್ನ ಮಾಡ್ತಿದ್ದಾರೆ. ಆದರೆ ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ. ಬೇಗ ಹೊರಗೆ ಬಂದ್ರೆ ನಿಮಗೆ ಒಳ್ಳೆಯದು ಎಂದು ಎಚ್ಚರಿಸಿದ್ದೀನಿ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು ಇನ್ನು ಯೋಗೇಶ್ವರ್ ಅವರನ್ನು ಸಹಿಸ್ತಾರಾ ಎಂದರು.

ಯೋಗೇಶ್ವರ್ ಅವರಿಗೆ ಚನ್ನಪಟ್ಟಣ ಮಣ್ಣಿನ ಬಗ್ಗೆ, ಇಲ್ಲಿನ ರೈತ ಸಮುದಾಯದ ಬಗ್ಗೆ, ಇಲ್ಲಿನ ಪಶುಪಾಲಕರು, ಗೋ ಸಾಕಾಣಿಕೆದಾರರ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಹಾಗೂ ಕಾಳಜಿ ಇಟ್ಟುಕೊಂಡಿದ್ದಾರೆ. ಹೀಗಾಗಿ ರೈತ ಕುಲದ ಉದ್ದಾರಕ್ಕಾಗಿ ಕೆರೆಗಳನ್ನು ತುಂಬಿಸಿ ಪುಣ್ಯಾತ್ಮ‌ ಎನ್ನಿಸಿಕೊಂಡರು ಎಂದು ಮೆಚ್ಚುಗೆ ಸೂಚಿಸಿದರು.

ಮಂಡ್ಯ ಲೋಕಸಭೆಯಲ್ಲಿ, ರಾಮನಗರ ವಿಧಾನಸಭೆಯಲ್ಲಿ ನಿಖಿಲ್ ಸೋತಿದ್ದಾರೆ. ಈಗ ಚನ್ನಪಟ್ಟಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಅಳಿಯ ಡಾ.ಮಂಜುನಾಥ್ ಗೆಲುವಿಗೆ ಯೋಗೇಶ್ವರ್ ಬಹಳ ಶ್ರಮಿಸಿದರು. ಆಗಲೇ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್​ಗೆ ಬೆಂಬಲಿಸಿ ಗೆಲ್ಲಿಸುವ ಭರವಸೆ ನೀಡಿದ್ದರು. ಆದರೆ, ಚುನಾವಣೆ ಬಂದಾಗ ಕೈ ಕೊಟ್ಟರು ಎಂದು ವ್ಯಂಗ್ಯವಾಡಿದರು.‌

ಮೋದಿಯಂಥಾ ಸುಳ್ಳುಗಾರ ಇಲ್ಲ ಅಂದಿದ್ದ ದೇವೇಗೌಡರು

ಮೋದಿಯವರಂತಹಾ ಸುಳ್ಳ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುವುದಾಗಿ ದೇವೇಗೌಡರು ಹೇಳಿದ್ದರು. ಈಗ ಮೋದಿಯವರನ್ನು ಯದ್ವಾತದ್ವಾ ಹೊಗಳುತ್ತಿದ್ದಾರೆ ಎಂದರು.‌

ಈಗ ಸಿದ್ದರಾಮಯ್ಯಗೆ ಸೊಕ್ಕು, ಅಹಂ ಎನ್ನುತ್ತಿದ್ದಾರೆ

ನಾನು, ಜಾಲಪ್ಪ ಅವರು ಇಲ್ಲದೇ ಹೋಗಿದ್ದರೆ 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರಲಿಲ್ಲ. ದೇವೇಗೌಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ರಾಷ್ಟ್ರೀಯ ಅಧ್ಯಕ್ಷರಾದ ಎಸ್.ಆರ್.ಬೊಮ್ಮಾಯಿ ಸಿದ್ದರಿರಲಿಲ್ಲ. ಏಕೆಂದರೆ ಇವರು ಬೊಮ್ಮಾಯಿ ಸರ್ಕಾರವನ್ನು ಕೆಡವಿದ್ದರು. ಆದರೂ ಆ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿ ದೇವೇಗೌಡರ ಪರವಾಗಿ ನಿಂತೆವು. ಈಗ ಸಿದ್ದರಾಮಯ್ಯ ಅವರಿಗೆ ಸೊಕ್ಕು, ಅಹಂ ಎನ್ನುತ್ತಿದ್ದಾರೆ. ಇದು ಪಾಳೇಗಾರಿಕೆ ಅಲ್ವಾ ದೇವೇಗೌಡರೇ ಎಂದು ಪ್ರಶ್ನಿಸಿದರು.

ಆಕಸ್ಮಿಕವಾಗಿ ಪ್ರಧಾನಿ ಆದ ದೇವೇಗೌಡರು ಪಾಳೆಗಾರಿಕೆ ಮಾತ್ರ ಬಿಡಲ್ಲ. ದಲಿತರು, ಹಿಂದುಳಿದವರನ್ನು ಕಂಡ್ರೆ ಆಗಲ್ಲ. ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ. ಇದೆಲ್ಲಾ ಪಾಳೇಗಾರಿಕೆ ಅಲ್ವಾ ? ಮೊಮ್ಮಗನಿಗಾಗಿ ಒಂದು ವಾರದಿಂದ ಚನ್ನಪಟ್ಟಣದಲ್ಲೇ ಇದ್ದಾರೆ. ಜೆಡಿಎಸ್ ಅಥವಾ ಬಿಜೆಪಿ ಯಿಂದ ಬೇರೆ ಯಾರಾದರೂ ನಿಂತಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಚನ್ನಪಟ್ಟಣದಲ್ಲಿ ನಿಂತು ಮತ ಕೇಳ್ತಿದ್ರಾ ? NDA ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧಿಸಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಇದ್ದು ಮತ ಕೇಳ್ತಿದ್ರಾ ಎಂದು ಪ್ರಶ್ನಿಸಿದರು.

ಚನ್ನಪಟ್ಟಣಕ್ಕೆ ಏನು ಮಾಡಿದ್ದೀರಿ ಎನ್ನುವುದನ್ನು ಕ್ಷೇತ್ರದ ಜನತೆ ಕೇಳಬೇಕು. ಬರೀ ಕಣ್ಣೀರು ಹಾಕೋದಲ್ಲ. ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣು‌ಮಕ್ಕಳ ಪರವಾಗಿ ಕಣ್ಣೀರೇ ಬರಲಿಲ್ಲ ಪಾಪ ದೇವೇಗೌಡರಿಗೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net