

ಮೈಸೂರು: ಕಾಂಗ್ರೆಸ್ ಋಣದಿಂದ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದು ಎಂಬುದು ನೆನಪಿರಲಿ, ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಹಿರಿಯ ರಾಜಕಾರಣಿ, ದೇಶದ ಪ್ರಧಾನಿಯಾಗಿದ್ದ ದೇವೇಗೌಡ ಅವರು ಹಿಂದಿನದನ್ನು ಮರೆತಿರುವಂತಿದೆ. ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ. ಅವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್. ಅವರ ಮಗನನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಹಾಗಾಗಿ ಕಾಂಗ್ರೆಸ್ ಋಣ ಅವರ ಮೇಲಿದೆ ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕುಟುಂಬ ರಕ್ಷಣೆಗಾಗಿ ಈಗ ಬಿಜೆಪಿ ಸೇರಿಕೊಂಡು ಜಾತ್ಯತೀತ ತತ್ವವನ್ನ ಬದಿಗೊತ್ತಿದ್ದಾರೆ. ಅವರಿಗೆ ಜನರೇ ಉತ್ತರ ಕೊಡುವರು. ಜಾತ್ಯಾತೀತ ಎಂಬ ಹೆಸರನ್ನು ತೆಗೆಯುವ ದಿನ ಹತ್ತಿರವಾಗುತ್ತಿದ್ದು, ಜನರೇ ತೆಗೆಯಲಿದ್ದಾರೆ ಎಂದು ಕುಟುಕಿದರು.
ಮಂಡ್ಯದ ಅಭಿವೃದ್ಧಿಗೆ ಎಂದು 8 ಸಾವಿರ ಕೋಟಿ ರೂ.ಅನುದಾನ ಕೊಡುವುದಾಗಿ ಘೋಷಿಸಿದ್ದ ಕುಮಾರಸ್ವಾಮಿ ಅವರು ತಮ್ಮ ಮಗ ಸೋತ ನಂತರ 8 ರೂ.ಅನ್ನೂ ಕೊಡದೆ ಅನುದಾನ ಹಿಂಪಡೆಕೊಂಡರು. ಇದು ಮಂಡ್ಯದ ಜನರಿಗೆ ಗೊತ್ತಿದೆ. ಮೊದಲು ಸ್ಪರ್ಧೆಗಿಳಿಯಲಿ ಮಂಡ್ಯದ ಜನ ಬುದ್ದಿ ಕಲಿಸುತ್ತಾರೆ ಎಂದರು.
ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನಾನು ಕೇಳಿಲ್ಲ. ಸಚಿವ ಸ್ಥಾನಕ್ಕೆ ಮಾತ್ರ ನಾನು ಆಕಾಂಕ್ಷಿಯಾಗಿದ್ದು, ಆ ದಿನಗಳಿಗೆ ಕಾಯುತ್ತಿದ್ದೇನೆ. ಮಂಡ್ಯದ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಎದುರಾಳಿ ಯಾರು ಎಂದು ನೋಡಿ ಅಭ್ಯರ್ಥಿ ನಿರ್ಧರಿಸುತ್ತೇವೆ. ಮಂಡ್ಯದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಯೋದು, ಬಿಡೋದು ಅವರಿಗೆ ಬಿಟ್ಟ ವಿಚಾರ. ಆದರೆ ಅವರು ಕರೆಯದೆ ಇದ್ದರೂ ನಮ್ಮ ಮುಖ್ಯಮಂತ್ರಿಯ ಹೆಸರಿನಲ್ಲಿಯೇ ರಾಮನ ಹೆಸರು ಸಮ್ಮಿಲನವಾಗಿದೆ ಎಂದರು.
ರಾಮ ಎಲ್ಲರ ಆಸ್ತಿಯೇ ಹೊರತು ಒಂದು ಪಕ್ಷದ ಆಸ್ತಿಯಲ್ಲ. ಅಯೋಧ್ಯೆಯ ರಾಮ ಹಾಗೂ ಊರೂರಿನ ರಾಮಮಂದಿರದಲ್ಲಿರುವ ರಾಮನಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ದೇಶಕ್ಕೆ ಶ್ರೀರಾಮನೊಬ್ಬನೆ. ಹಿಂದುತ್ವವೇ ಆಗಲಿ, ಹಿಂದುಗಳೇ ಆಗಲಿ ಯಾರೊಬ್ಬರ ಸ್ವತ್ತಲ್ಲ ಎಂದು ಹೇಳಿದರು.