50 ಸಾವಿರ ಕುಟುಂಬಕ್ಕೆ ಪಡಿತರ : ಶಾಸಕ ಗೌರಿಶಂಕರ್ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ದೇವೇಗೌಡ

20Tmk_HDD_Paditara_01
Published on

ತುಮಕೂರು: ಕರೊನಾ ಭೀತಿಯಿಂದ ಇಡೀ ದೇಶವೇ ಸಂಕಷ್ಟದಲ್ಲಿರುವಾಗ ತಾಯಿಯ ಮಾತಿನಂತೆ ಬಡವರು, ನಿರ್ಗತಿಕರು ಹಾಗೂ ಕೂಲಿಕಾರ್ಮಿಕರಿಗೆ ಸಹಾಯ ಹಸ್ತ ಚಾಚುವ ಮೂಲಕ ಗ್ರಾಮೀಣ ಜನರ ಬದುಕು ಹಸನುಗೊಳಿಸುತ್ತಿರುವ ಶಾಸಕ ಡಿ.ಸಿ.ಗೌರಿಶಂಕರ್ ಕಾರ್ಯವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶ್ಲಾಘಿಸಿದರು.

ಹೊನ್ನುಡಿಕೆಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ 50 ಸಾವಿರ ಕುಟುಂಬಗಳಿಗೆ 3.50 ಕೋಟಿ ರೂ., ವೆಚ್ಚದಲ್ಲಿ ಪ್ರತಿ ಕುಟುಂಬಕ್ಕೆ 10 ಕೆಜಿ ಪಡಿತರ ಕಿಟ್, ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದ ದೇವೇಗೌಡರು, ಮೇ 3ರವರೆಗೆ ಲಾಕ್‌ಡೌನ್ ಜಾರಿ ಇದ್ದು, ಅಲ್ಲಿಯವರೆಗೆ ಪ್ರತಿನಿತ್ಯ ಐದು ಸಾವಿರ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸುವ ಮೂಲಕ ನಿಸ್ವಾರ್ಥ ಸೇವೆಯನ್ನು ಗೌರಿಶಂಕರ್ ಸಲ್ಲಿಸುತ್ತಿದ್ದು, ಶಾಸಕರಾಗಿ ಕ್ಷೇತ್ರದ ಜನತೆ ಸಂಕಷ್ಟದಲ್ಲಿರುವಾಗ ಅವರಿಗೆ ಸ್ಪಂದಿಸಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕರೊನಾ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಹಸಿವು ಮುಕ್ತ ಕ್ಷೇತ್ರ: ಕರೊನಾ ಸಂಕಷ್ಟದಲ್ಲಿ ರೈತರಿಗೆ ನೆರವಾಗುವಂತೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ ಆದೇಶ ಪಾಲಿಸಿ ರೈತರಿಗೆ ಸಹಾಯ ಮಾಡುತ್ತಿದ್ದು, ಸ್ವತಃ ದೇವೇಗೌಡರೇ ಚಾಲನೆ ನೀಡಿದ್ದು ಇನ್ನಷ್ಟು ಸೇವಾ ಮನೋಭಾವ ಹೆಚ್ಚಿಸಿದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು. ಕ್ಷೇತ್ರದ ರೈತರೇ ಬೆಳೆದಿರುವ ತರಕಾರಿ, ಹಣ್ಣಗಳನ್ನು ಖರೀದಿಸಿ ಎಲ್ಲ ಮನೆಗಳಿಗೂ ತಲುಪಿಸಲಾಗುತ್ತದೆ. ಪಡಿತರ ಕಿಟ್ ಅನ್ನು 7 ಜಿಪಂ ಕ್ಷೇತ್ರಗಳಲ್ಲೂ ವಿತರಿಸುವ ಮೂಲಕ ಹಸಿವು ಮುಕ್ತ ಕ್ಷೇತ್ರ ನಿರ್ಮಿಸುವುದು ನಮ್ಮ ಉದ್ದೇಶ ಎಂದರು. ಸಿದ್ದಗಂಗಮ್ಮಚೆನ್ನಿಗಪ್ಪ, ಎಂಎಲ್‌ಸಿ ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಡಿ.ಸಿ.ವೇಣುಗೋಪಾಲ್, ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ನರುಗನಹಳ್ಳಿ ವಿಜಯಕುಮಾರ್, ತಹಸೀಲ್ದಾರ್ ಮೋಹನ್ ಕುಮಾರ್, ತಾಪಂ ಇಒ ಜೈಪಾಲ್ ಇದ್ದರು.

ಸರ್ಕಾರದ ಸಹಾಯ ಪಡೆಯದೆ ಇಡೀ ಕ್ಷೇತ್ರದ ಮನೆ, ಮನೆಗಳಿಗೆ ಪಡಿತರ ಕಿಟ್ ತಲುಪಿಸುವ ಕಾರ್ಯ ಪ್ರಶಂಸಾರ್ಹ. ತಂದೆ ಚೆನ್ನಿಗಪ್ಪ ಮರಣದ ನೋವಿನಲ್ಲೂ ಜನತೆಗೆ ಸಹಾಯ ಮಾಡುತ್ತಿರುವ ಗೌರಿಶಂಕರ್ ಕುಟುಂಬಕ್ಕೆ ನಾನು ಋಣಿ. ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ ಲಕ್ಷಾಂತರ ಜನರಿಗೆ ನಿಮ್ಮ ತಂದೆ (ದಿವಂಗತ ಚೆನ್ನಿಗಪ್ಪ) ಊಟ ಹಾಕಿದ್ದರು. ನೀನು ಅವರಂತೆ ಗ್ರಾಮಾಂತರ ಕ್ಷೇತ್ರದ ಬಡವರಿಗೆ ಕಷ್ಟ ಎದುರಾದಾಗ ಸಹಾಯ ಮಾಡಿ ಅವರ ಹಾದಿಯಲ್ಲೇ ನಡೆಯುವಂತೆ ಹೇಳಿದೆ. ಜತೆಗೆ ಅಪ್ಪಾಜಿ (ದೇವೇಗೌಡರು) ಹೆಸರು ಉಳಿಸಬೇಕು ಎಂದಿದ್ದೆ. ಅದರಂತೆ ಗೌರಿಶಂಕರ್ ಪಡಿತರ ವಿತರಿಸಲು ಮುಂದಾಗಿದ್ದು ಅಪ್ಪಾಜಿಯವರೇ ಬಂದು ಪಡಿತರ ನೀಡುತ್ತಿರುವುದು ಸಂತಸವನ್ನುಂಟು ಮಾಡಿದೆ. ಸಿದ್ದಗಂಗಮ್ಮ ಮಾಜಿ ಸಚಿವ ದಿ.ಚೆನ್ನಿಗಪ್ಪ ಅವರ ಪತ್ನಿ ಚುನಾವಣೆಗೆ ನಿಲ್ಲೋದಕ್ಕೆ ಸಾಲಸೋಲ ಮಾಡಿ ನಿಲ್ತೀವಿ. ನನ್ನ ಜನರಿಗೆ ಸಮಸ್ಯೆ ಅಂದಾಗ ಸಾಲ ಮಾಡೋದ್ರಲ್ಲಿ ತಪ್ಪಿಲ್ಲ ಅದು ನನ್ನ ಕರ್ತವ್ಯ. ಕ್ಷೇತ್ರವನ್ನು ಹಸಿವು ಮುಕ್ತಗೊಳಿಸಲು ಪಣ ತೊಟ್ಟಿದ್ದು, ಪಡಿತರ ಮುಗಿದವರು ಸಂಪರ್ಕಿಸಿದರೆ ಅವರಿಗೆ ಪಡಿತರವನ್ನು ಮತ್ತೆ ಪೂರೈಸಲಾಗುವುದು. ಡಿ.ಸಿ.ಗೌರಿಶಂಕರ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net