ಸಂಘಟಿತ ಹೋರಾಟ ಅನಿವಾರ್ಯ

Untitled design (9)
Published on

ದೇವದುರ್ಗ: ಕೇಂದ್ರ-ರಾಜ್ಯ ಸರ್ಕಾರಗಳು ಕಾರ್ಮಿಕರ ಪರವಾಗಿದ್ದ ಹಕ್ಕುಗಳನ್ನು ಕಿತ್ತಿಕೊಂಡು ಮಾಲೀಕರಪರ ಕಾಯ್ದೆ ಜಾರಿಗೊಳಿಸುತ್ತಿವೆ ಎಂದು ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ ಆರೋಪಿಸಿದರು.

ಪಟ್ಟಣದ ಎಪಿಎಂಸಿಯಲ್ಲಿ ಸಿಐಟಿಯುನಿಂದ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸರ್ಕಾರಗಳು ಬಂಡವಾಳಗಾರರ ಹಣತಿಯಂತೆ ಕೆಲಸ ಮಾಡುತ್ತಿವೆ. ದೇಶದಲ್ಲಿ ಕಾರ್ಮಿಕರು 16 ತಾಸುಗಳ ಕೆಲಸ ಮಾಡಬೇಕು ಎನ್ನುವ ಕಾಯ್ದೆ ಮಾಡಲು ಸರ್ಕಾರ ಹೊರಟಿದೆ. ಕಾರ್ಮಿಕರ ಪರವಾಗಿ ಇರುವ ಸೌಲಭ್ಯಗಳನ್ನು ಹಾಗೂ ಕಾನೂನುಗಳನ್ನು ಬದಲಿಸಿ 4 ಕಾರ್ಮಿಕ ಸಂಹಿತೆ( ಕಾರ್ಮಿಕರ ಕೋಡ್) ತರಲು ಮುಂದಾಗಿವೆ. ಸಂಹಿತೆ ಜಾರಿಯಾದರೆ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗುತ್ತದೆ. ಹಕ್ಕುಗಳ ರಕ್ಷಣೆಗೆ ಕಾರ್ಮಿಕರ ಸಂಘಟಿತ ಹೋರಾಟ ಅಗತ್ಯ ಎಂದರು.

ಕಾಯಂ ಪದ್ಧತಿ ತೆಗೆದು ಗುತ್ತಿಗೆ, ದಿನಗೂಲಿ, ಸ್ಕಿಲ್ ಲೇಬರ್ ಪದ್ಧತಿ ಜಾರಿಗೊಳಿಸಲಾಗುತ್ತಿದೆ. ಇದರಿಂದ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ನೇಮಕಾತಿ ಇಲ್ಲದೆ ಗುತ್ತಿಗೆ, ಅತಿಥಿ ಪದ್ಧತಿ ಜಾರಿ ಮಾಡಲು ಮುಂದಾಗಿವೆ. ಈ ಅಪಾಯದ ವಿರುದ್ಧ ದುಡಿಯುವ ವರ್ಗದ ಕಾರ್ಮಿಕರು ಐಕ್ಯ ಹೋರಾಟ ಮಾಡಬೇಕಿದೆ ಎಂದರು.

ಗ್ರಾಪಂ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಪಾಂಡುರಂಗ, ಬಿಸಿಯೂಟ ನೌಕರರಾದ ಮರಿಯಮ್ಮ, ಶೋಭಾ, ಖಾಜಾಬೀ, ಮಂಜುಳಾ, ಗ್ರಾಪಂ ನೌಕರರಾದ ಹೊನ್ನಪ್ಪ ನಾಯಕ, ಪಂಚಯ್ಯ, ಶಂಕರ್, ಕಟ್ಟಡ ಕಾರ್ಮಿಕರ ಸಂಘಟನೆ ಮುಖಂಡರಾದ ಯುಸೂಪ್ ಗ್ವಾಡಿಕಾರ, ಪಿಡ್ಡಪ್ಪ ನಾಯಕ, ಹಮಾಲಿ ಕಾರ್ಮಿಕರ ಸಂಘಟನೆ ಮುಖಂಡರಾದ ಯುಸೂಫ್, ಯಂಕಪ್ಪ, ದುರುಗಪ್ಪ, ಹನುಮತ್ರಾಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net