ಅಮೆರಿಕ ಉಪಾಧ್ಯಕ್ಷ ಭಾರತ ಭೇಟಿಗೆ ವಿರೋಧ

Devadurga citu protest
ದೇವದುರ್ಗ ತಾಲೂಕಿನ ಜಾಲಹಳ್ಳಿ ನಾಡಕಚೇರಿಯಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಪ್ರಾಂತ ರೈತ ಸಂಘ ಮನವಿ ಸಲ್ಲಿಸಿತು. ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಅಧ್ಯಕ್ಷ ದುರಗಪ್ಪ ವರಟ್ಟಿ, ರಂಗನಾಥ ಬುಂಕಲದೊಡ್ಡಿ, ಶಬ್ಬೀರ್ ಜಾಲಹಳ್ಳಿ ಇತರರಿದ್ದರು.
Published on

ದೇವದುರ್ಗ: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಭೇಟಿ ವಿರೋಧಿಸಿ ತಾಲೂಕಿನ ಜಾಲಹಳ್ಳಿ ನಾಡ ಕಚೇರಿ ಮುಂದೆ ಪ್ರಾಂತ ರೈತ ಸಂಘದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದ ಬೆದರಿಕೆ ದೇಶದ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳಿಗೆ ಸುಂಕರಹಿತ ಮುಕ್ತಗೊಳಿಸುವ ಒತ್ತಡ ಭೇಟಿ ಉದ್ದೇಶವಾಗಿದೆ. ಕರ್ನಾಟಕ ದೇಶದಲ್ಲೇ ಎರಡನೇ ಅತಿ ದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿದೆ. ಹಲವು ಜಿಲ್ಲೆಗಳ ರೈತರು ಜೀವನಾಧಾರಕ್ಕಾಗಿ ಹೈನುಗಾರಿಕೆ ಅವಲಂಬಿಸಿದ್ದಾರೆ. ದ್ವಿದಳ ಧಾನ್ಯಗಳು ಹಾಗೂ ಎಥನಾಲ್ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾಗಿವೆ. ಕರಾವಳಿ ಭಾಗ ಮೀನುಗಾರಿಕೆ ಕೃಷಿಯನ್ನು ಅವಲಂಬಿಸಿದೆ. ಈ ಎಲ್ಲ ಕೃಷಿ ಉತ್ಪನ್ನಗಳು ಬೆಂಬಲ ಬೆಲೆ ಅಭಾವ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳದಿಂದ ನಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಈ ವಲಯಗಳು ಸೇರಿ ವಿವಿಧ ರೀತಿಯ ತೋಟಗಾರಿಕೆ ಉತ್ಪನ್ನಗಳ ಸುಂಕ ರಹಿತ ಆಮದು ರೈತರನ್ನು ದಿವಾಳಿ ಎಬ್ಬಿಸಿ ಸಾಲಬಾಧೆಗೆ ಸಿಲುಕಿಸಲಿದೆ. ಹೀಗಾಗಿ ಯಾವುದೇ ಒತ್ತಡಕ್ಕೂ ಮಣಿಯದೆ ಹೈನುಗಾರಿಕೆ, ಮೀನುಗಾರಿಕೆ, ಕೃಷಿಯನ್ನು ವಾಣಿಜ್ಯ ಮಾತುಕತೆಗಳಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.

ಜಾಲಹಳ್ಳಿ ಘಟಕದ ಅಧ್ಯಕ್ಷ ದುರಗಪ್ಪ ವರಟ್ಟಿ, ತಾಲೂಕು ಕಾರ್ಯದರ್ಶಿ ರಂಗನಾಥ ಬುಂಕಲದೊಡ್ಡಿ, ಶಬ್ಬೀರ್ ಜಾಲಹಳ್ಳಿ, ಗ್ರಾಪಂ ಸದಸ್ಯರಾದ ಮುಕ್ತಂ ಪಾಷಾ, ಬಸವರಾಜ ವಂದಲಿ, ಹನುಮಂತ, ರಿಯಾಜ್ ಖುರೇಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net