ದೇವದುರ್ಗದಲ್ಲಿ ಟೋಲ್‌ಗೇಟ್ ಬಂದ್!

Devadurga tool gate working stop
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಟೋಲ್‌ಗೇಟ್ ಬಂದ್ ಮಾಡಿರುವುದು.
Published on

ದೇವದುರ್ಗ: ತಾಲೂಕಿನ ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಜನರ ವಿರೋಧದ ನಡುವೆಯೂ ನಿರ್ಮಿಸಿದ್ದ ಎರಡು ಟೋಲ್‌ಗೇಟ್‌ಗಳನ್ನು ಏಜೆನ್ಸಿ ಗುರುವಾರದಿಂದ ತಾತ್ಕಾಲಿಕವಾಗಿ ಬಂದ್ ಮಾಡಿದೆ.

ಸಂಘಟನೆಗಳ ಹೋರಾಟ, ಜನರ ಆಕ್ರೋಶ ಹಾಗೂ ಗ್ರಾಮಸ್ಥರ ಪ್ರತಿಭಟನೆಗೆ ಬೆದರಿದ ಏಜೆನ್ಸಿ, ಜಾಲಹಳ್ಳಿ ಹಾಗೂ ಕಾಕರಗಲ್ ಗ್ರಾಮದ ಟೋಲ್‌ಗೇಟ್‌ಗಳಲ್ಲಿ ವಾಹನಗಳ ಶುಲ್ಕ ವಸೂಲಿ ಸ್ಥಗಿತಗೊಳಿಸಿದೆ. ಕಾಕರಗಲ್ ಟೋಲ್‌ನಲ್ಲಿ ಬುಧವಾರ ತಡರಾತ್ರಿ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬ್ಯಾರಿಕೇಡ್ ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂಬಂಧ ಗಬ್ಬೂರು ಠಾಣೆಯಲ್ಲಿ 14 ಜನರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಕಾಕರಗಲ್ ಟೋಲ್ ಬುಧವಾರ ರಾತ್ರಿಯಿಂದ ಬಂದ್ ಆಗಿದ್ದರೆ, ಜಾಲಹಳ್ಳಿಯಲ್ಲಿ ಗುರುವಾರ ಸಂಜೆಯಿಂದ ಬಂದ್ ಮಾಡಲಾಗಿದೆ.

ವಿಜಯವಾಣಿ ಬೆಳಕು ಚೆಲ್ಲಿತ್ತು: ಸುಮಾರು 73 ಕಿಮೀ ರಾಜ್ಯ ಹೆದ್ದಾರಿಯಲ್ಲಿ ಎರಡು ಕಡೆ ಟೋಲ್‌ಗೇಟ್ ನಿರ್ಮಿಸಲು ಹಾಸನದ ಭಾರತಿ ಕಂಪನಿ ಏಜೆನ್ಸಿಗೆ ಟೆಂಡರ್ ಆಗಿತ್ತು. ಫೆಬ್ರವರಿ 2ನೇ ವಾರದಲ್ಲಿ ಟೋಲ್ ನಿರ್ಮಾಣ ಮಾಡಲಾಗಿತ್ತು. ಈ ಕುರಿತು ವಿಜಯವಾಣಿ ಫೆ.19ರಂದು ಫೋಕಸ್ ಸ್ಟೋರಿ ಮಾಡಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ಫೆ.25ರಂದು ವಿವಿಧ ಸಂಘಟನೆಗಳು ಕಾಕರಗಲ್‌ನಲ್ಲಿ ರಾಜ್ಯ ಹೆದ್ದಾರಿ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದವು.

ಇದರಿಂದ ಎರಡು ತಿಂಗಳು ತಾತ್ಕಾಲಿಕವಾಗಿ ಬಂದ್ ಮಾಡಿದ್ದ ಏಜೆನ್ಸಿ, ಏ.21ರಂದು ಏಕಾಏಕಿ ಎರಡು ಕಡೆ ಟೋಲ್ ವಸೂಲಿ ಮಾಡಲು ಆರಂಭಿಸಿತ್ತು. ಏ.22ರಂದು ಸದ್ದಿಲ್ಲದೆ ಟೋಲ್ ವಸೂಲಿ ಆರಂಭ ಶೀರ್ಷಿಕೆಯಡಿ ವಿಜಯವಾಣಿ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಸಂಸದ ಜಿ.ಕುಮಾರ ನಾಯಕ ಟೋಲ್‌ಗೇಟ್ ಬಂದ್ ಮಾಡುವಂತೆ ಕೋರಿ ಏ.22ರಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಗೆ ಪತ್ರ ಬರೆದಿದ್ದರು. ಅಲ್ಲದೆ ಏ.23ರಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಕಾಕರಗಲ್ ಟೋಲ್‌ಗೇಟ್ ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಏಜೆನ್ಸಿ ಎರಡು ದಿನಗಳಿಂದ ಟೋಲ್‌ಗೇಟ್ ತಾತ್ಕಾಲಿಕವಾಗಿ ಬಂದ್ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net