ಪ್ರವಾಸಿ ಮಂದಿರವೀಗ ಶಾಸಕರ ಕಚೇರಿ !

Devadurga MLA office in guest house
ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಶಾಸಕರ ಕಾರ್ಯಾಲಯ ಎನ್ನುವ ನಾಮಫಲಕ ಹಾಕಿರುವುದು.
Published on

ದೇವದುರ್ಗದಲ್ಲಿ ನಾಮಫಲಕ ಅಳವಡಿಕೆಗೆ ಅಪಸ್ವರ

ಅಮರೇಶ ಚಿಲ್ಕರಾಗಿದೇವದುರ್ಗ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪವಿರುವ ಪ್ರವಾಸಿ ಮಂದಿರಕ್ಕೆ ಶಾಸಕರ ಕಾರ್ಯಾಲಯವೆಂದು ನಾಮಫಲಕ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರ ಬಳಕೆಗೆ ಇರುವ ಪ್ರವಾಸಿ ಮಂದಿರವನ್ನು ಶಾಸಕರ ಕಚೇರಿ ಮಾಡಿರುವುದು ಎಷ್ಟು ಸರಿ ಎಂದು ವಿವಿಧ ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ.

ಪ್ರತಿ ತಾಲೂಕು, ಹೋಬಳಿ ಕೇಂದ್ರದಲ್ಲಿ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಆರಂಭಿಸಿದ್ದು, ನಿರ್ವಹಣೆಯೂ ಮಾಡುತ್ತಿದೆ. ಹಲವು ವರ್ಷಗಳ ಹಿಂದೆ ಇಲ್ಲಿ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಟ್ಟಣ ಹೊರವಲಯದಲ್ಲಿ ಇನ್ನೊಂದು ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ಅದು ಪಟ್ಟಣದಿಂದ ಎರಡ್ಮೂರು ಕಿಮೀ ದೂರವಿದ್ದು ಗುಡ್ಡದ ಮೇಲೆ ಇರುವ ಕಾರಣ ಸಾರ್ವಜನಿಕರಿಗೆ ಅಷ್ಟಾಗಿ ಉಪಯೋಗವಾಗಿಲ್ಲ.

ಹಳೇ ಪ್ರವಾಸಿ ಮಂದಿರ ಪಟ್ಟಣದ ಕೇಂದ್ರ ಸ್ಥಾನದಲ್ಲಿದ್ದು ಸಂಘಟನೆಗಳು, ಜನರಿಗೆ ಅನುಕೂಲವಾಗಿದೆ. ಸಂಘಟನೆಗಳು ಸಭೆ, ಕಾರ್ಯಕ್ರಮ, ಪ್ರೆಸ್‌ಮೀಟ್ ಇದೇ ಪ್ರವಾಸಿ ಮಂದಿರದಲ್ಲಿ ಮಾಡುತ್ತಿದ್ದವು. ಅಲ್ಲದೆ ಗಣ್ಯರು, ಅಧಿಕಾರಿಗಳು ಬಂದರೆ ಇಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಸುತ್ತಲೂ ಅಂಗಡಿ, ಮುಂಗಟ್ಟು, ಹೋಟೆಲ್ ಇರುವುದರಿಂದ ಜನರಿಗೆ ಅನುಕೂಲವಾಗಿತ್ತು. ಅಲ್ಲದೆ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಪ್ರೆಸ್‌ಮೀಟ್ ಜತೆಗೆ ಜನರ ಆಹವಾಲು ಆಲಿಸುತ್ತಿದ್ದರು.

ಈ ಹಿಂದೆ ಶಾಸಕರಾದವರು ಪ್ರವಾಸಿ ಮಂದಿರವನ್ನು ಬಳಸುತ್ತಿದ್ದರೂ ಶಾಸಕರ ಕಚೇರಿ ಎಂದು ನಾಮಫಲಕ ಹಾಕಿರಲಿಲ್ಲ. ಮನೆ, ಬಾಡಿಗೆ ಕಟ್ಟಡದಲ್ಲಿ ಶಾಸಕರ ಕಚೇರಿ ನಡೆಸುತ್ತಿದ್ದರು. ಶಾಸಕಿ ಕರೆಮ್ಮ ಜಿ.ನಾಯಕ ಪ್ರವಾಸಿ ಮಂದಿರದಲ್ಲಿ ಸಭೆ ಸಮಾರಂಭ ಮಾಡಿದರೂ ಎರಡು ವರ್ಷ ನಾಮಫಲಕ ಹಾಕಿರಲಿಲ್ಲ. ಆದರೆ, ಈಗ ಶಾಸಕರ ಕಾರ್ಯಾಲಯ ಎಂದು ದೊಡ್ಡ ನಾಮಫಲಕ ಹಾಕಿದ್ದು ಚರ್ಚೆಗೆ ಕಾರಣವಾಗಿದೆ.

ಶಾಸಕರ ಕಚೇರಿ ಎಂದರೆ, ಸಾಮಾನ್ಯ ಜನರು ಸಮಸ್ಯೆ ಸಲ್ಲಿಸಲು, ಅಧಿಕಾರಿಗಳ ಸಭೆ ನಡೆಸಲು, ತಮ್ಮದೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಮೀಸಲಾಗಿರುತ್ತದೆ. ಅಲ್ಲಿ ಸಂಘಟನೆಗಳ ಸಭೆ, ಸಮಾರಂಭ, ಸಣ್ಣಪುಟ್ಟ ಕಾರ್ಯಕ್ರಮ ಮಾಡಲು ಅವಕಾಶ ಇರುವುದಿಲ್ಲ. ಈಗ ಪ್ರವಾಸಿ ಮಂದಿರ ಶಾಸಕರ ಕಚೇರಿಯಾಗಿರುವ ಕಾರಣ ಸಂಘಟನೆಗಳು ಸಭೆ, ಸಮಾರಂಭ ಮಾಡಲು ಸಮಸ್ಯೆಯಾಗಿದೆ. ಅಲ್ಲದೆ ಹಿಂದಿನಂತೆ ಮುಕ್ತವಾಗಿ ತಂಗುವ, ಸುದೀರ್ಘವಾಗಿ ಸಭೆ, ಸಮಾರಂಭ, ಉಪಾಹಾರ ಮಾಡಲು ಅವಕಾಶವಿಲ್ಲ. ಹೀಗಾಗಿ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಪ್ರವಾಸಿ ಮಂದಿರ ಎಲ್ಲರಿಗೂ ಮುಕ್ತವಾಗಿದ್ದು ನಿಯಮ ಪ್ರಕಾರ ಸಭೆ ನಡೆಸಲು, ತಂಗಲು ಅವಕಾಶವಿದೆ. ನಾನು ರಜೆ ಮೇಲಿದ್ದು ಅಲ್ಲಿನ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಪರಿಶೀಲಿಸುವೆ. | ಶಿವಾಜಿ ನಿಡಗುಂದಿ ಲೋಕೋಪಯೋಗಿ ಇಲಾಖೆ ಎಇಇ, ದೇವದುರ್ಗ

ಪ್ರವಾಸಿ ಮಂದಿರರದಲ್ಲಿ ಶಾಸಕರು ಸಭೆ, ಜನರ ಆಹವಾಲು ಸ್ವೀಕರಿಸಲು ವಿರೋಧವಿಲ್ಲ. ಶಾಸಕರ ಕಾರ್ಯಾಲಯವೆಂದು ನಾಮಫಲಕ ಯಾವ ಕಾನೂನಿನಡಿ ಹಾಕಿದ್ದಾರೆ. ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನರ ಹಿತಕಾಯಲು ಕಚೇರಿ ಮಾಡಿದ್ದೇವೆ ಎನ್ನುತ್ತಾರೆ. ಇದೇ ಪ್ರವಾಸಿಮಂದಿರದಲ್ಲಿ ಪೊಲೀಸರ ಮೇಲೆ ಶಾಸಕಿ ಬೆಂಬಲಿಗರು ಹಲ್ಲೆ ಮಾಡಿದ್ದರು. ಹಾಗಾದ್ರೆ ಎಲ್ಲಿದೆ ಜನರ ಹಿತ?. ರಾಜಕೀಯ ಹೊರತಾದ ಸಂಘಟನೆ, ಸಂಸ್ಥೆಗಳು ಸಭೆ ಮಾಡಲು ಸಮಸ್ಯೆಯಾಗಲಿದೆ. | ವಿಶ್ವನಾಥ ಬಲ್ಲಿದವ್ ಭೀಮ್ ಆರ್ಮಿ ಸಂಘಟನೆ ತಾಲೂಕು ಅಧ್ಯಕ್ಷ, ದೇವದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net