ಸುಗ್ಗಿ ಸಂಭ್ರಮ ಕುಗ್ಗಿಸಿದ ಧಾನ್ಯಗಳ ಬೆಲೆ

Devadurga battha rate down
ದೇವದುರ್ಗ ತಾಲೂಕು ಕಮಲದಿನ್ನಿಯಲ್ಲಿ ರಾಶಿ ಮಾಡಿದ ಭತ್ತವನ್ನು ರೈತರು ಒಣಗಲು ಹಾಕಿರುವುದು.
Published on

ಅಮರೇಶ ಚಿಲ್ಕರಾಗಿ

ದೇವದುರ್ಗ: ಕೃಷಿ ಉತ್ಪನ್ನ ಮುಕ್ತ ಮಾರುಕಟ್ಟೆಯಲ್ಲಿ ಒಂದು ವಾರದಿಂದ ಕೃಷಿ ಬೆಳೆಗಳ ಬೆಲೆ ದಿಢೀರನೆ ಕುಸಿತದಿಂದ ಅನ್ನದಾತರು ಕಂಗಲಾಗಿದ್ದಾರೆ. ನಿನ್ನೆ ಬೆಲೆ ಇಂದು, ಇಂದಿನ ಬೆಲೆ ನಾಳೆ ಇರದ ಡೋಲಾಯಮಾನ ಸ್ಥಿತಿ ನಿರ್ಮಾಣವಾಗಿದೆ. ದಲ್ಲಾಳಿಗಳು ಹಾಗೂ ವ್ಯಾಪಾರಿಗಳ ಕೈಚಳಕದಿಂದ ಬೆಲೆ ಏರುಪೇರಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ತಾಲೂಕಿನ ರೈತರಿಗೆ ನವೆಂಬರ್ ಹಾಗೂ ಡಿಸೆಂಬರ್ ಸುಗ್ಗಿಯ ಕಾಲ. ಈ ಅವಧಿಯಲ್ಲಿ ಮುಂಗಾರು ಬೆಳೆ ಭತ್ತ, ಸೂರ್ಯಕಾಂತಿ, ವಾರ್ಷಿಕ ಬೆಳೆ ಹತ್ತಿ, ತೊಗರಿ ರಾಶಿ ಮಾಡುವ ಸಮಯ. ಅಕ್ಟೋಬರ್ ಕೊನೆವರೆಗೆ ಧಾನ್ಯಗಳ ಬೆಲೆ ಸ್ಥಿರವಾಗಿತ್ತು. ಆದರೆ, ಸುಗ್ಗಿಯ ಕಾಲ ಆರಂಭವಾದ ನಂತರ ಬೆಲೆಗಳ ಏರಿಳಿತ ಆರಂಭವಾಗಿದೆ. ಕ್ವಿಂಟಾಲ್‌ಗೆ 50-100ರೂ. ಏರಿಳಿತವಾದರೆ ರೈತರು ತಲೆ ಕೆಡಿಸಿಕೊಳ್ಳಲ್ಲ. ಆದರೆ, 700ರಿಂದ ಒಂದು ಸಾವಿರ ರೂ. ಇಳಿದರೆ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ.

ಬಹುತೇಕ ರೈತರು ಭತ್ತ ನಾಟಿ ಮಾಡಿದ್ದು ಅಂದಾಜು 30 ಸಾವಿರ ಹೆಕ್ಟೇರ್‌ನಲ್ಲಿ ಕವಳೆ ರಾಶಿಯಾಗಿದೆ. ಇನ್ನು 10 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ಹತ್ತಿ ಸುಮಾರು 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದಾರೆ. ಈ ಮೂರು ರೈತರಿಗೆ ಆದಾಯ ತರುವ ಬೆಳೆಗಳಾಗಿದ್ದು ಇವುಗಳ ಬೆಲೆಯೇ ಕುಸಿತವಾಗಿದೆ.

ಆರಂಭದಿಂದಲೂ ಹತ್ತಿ ಬೆಲೆ ಕುಸಿತಕಂಡಿದ್ದು ಖರೀದಿ ಕೇಂದ್ರ ತೆರೆದರೂ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿಲ್ಲ. ಇನ್ನು ನವೆಂಬರ್‌ನಲ್ಲಿ ಇದ್ದ ಭತ್ತದ ಬೆಲೆ ಈಗಿಲ್ಲ. ತೊಗರಿ ಬೆಲೆ ಕೂಡ ದಿಢೀರನೆ ಕುಸಿತಗೊಂಡಿದೆ. ಮೆಣಸಿನಕಾಯಿ ಬೆಲೆ ಕಳೆದ ಒಂದು ವರ್ಷದಿಂದ ಕುಸಿತವಾಗಿದ್ದು 12 ಸಾವಿರ ರೂ. ಮೇಲೆ ದಾಟುತ್ತಿಲ್ಲ. ಇನ್ನು ಸೂರ್ಯಕಾಂತಿ, ಸಜ್ಜೆ, ಕಡಲೆ ಕತೆ ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ ಎನ್ನುವಂತಿದೆ.

ನವೆಂಬರ್‌ನಲ್ಲಿ ಭತ್ತ ಪ್ರತಿಕಾಟಕ್ಕೆ (76 ಕೆಜಿ) 1650- 1700ರೂ. ಬೆಲೆಯಿತ್ತು. ಈಗ ಕುಸಿತಗೊಂಡು 1500-1550ರೂ.ಗೆ ಇಳಿಕೆಯಾಗಿದೆ. ಇನ್ನು ತೊಗರಿ ಬೆಲೆ ಡಿಸೆಂಬರ್ ಮೊದಲ ವಾರ 10 ಸಾವಿರ ಮೇಲಿದ್ದರೆ ಈವಾರ 9 ಸಾವಿರ ಕೆಳಗೆ ಕುಸಿದಿದೆ. ಹತ್ತಿಬೆಲೆ 6500ರಿಂದ 6900ರೂ.ಗೆ ಇದೆ. ನಾಲ್ಕು ಖರೀದಿ ಕೇಂದ್ರ ತೆರೆದಿದ್ದು 7100ರಿಂದ 7300ರೂ.ಗೆ ಬೆಲೆ ನಿಗದಿಯಿದೆ. ಅಲ್ಲಿ ಹಲವು ಷರತ್ತು ಹಾಕಿದ್ದು ಹಣ ತಡವಾಗಿ ಬರಲಿದೆ. ಹೀಗಾಗಿ ಸಾಲಸೂಲ ಮಾಡಿದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಖರೀದಿ ಕೇಂದ್ರಕ್ಕೆ ನಿರಾಸಕ್ತಿ

ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ತೆರೆಯಬೇಕು ಎಂದು ರೈತರು ಹೋರಾಟ ಮಾಡಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ. ಹತ್ತಿ ಖರೀದಿ ಕೇಂದ್ರ ಬಿಟ್ಟರೆ ಬೇರೆಕೇಂದ್ರಗಳ ಬಗ್ಗೆ ಅಧಿಕಾರಿಗಳು ಆಸಕ್ತಿಯೆ ತೋರುತ್ತಿಲ್ಲ. ಭತ್ತ, ತೊಗರಿ, ಜೋಳ, ಕಡಲೆ ಖರೀದಿ ಕೇಂದ್ರಕ್ಕೆ ಅನ್ನದಾತರು ಬೇಡಿಕೆ ಸಲ್ಲಿಸಿದ್ದಾರೆ. ಸದ್ಯ ತೊಗರಿ ಹಾಗೂ ಭತ್ತ ಖರೀದಿ ಕೇಂದ್ರದ ತುರ್ತು ಅಗತ್ಯವಿದೆ. ಆದರೆ, ಅಧಿಕಾರಿಗಳು ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಾವು-ಏಣಿ ಆಟ

ಡಿಸೆಂಬರ್ ಮೊದಲ ವಾರದಲ್ಲಿ ಕೆಂಪು ತೊಗರಿಬೆಲೆ ಕ್ವಿಂಟಾಲ್‌ಗೆ 10300 ರಿಂದ 10500ರೂ.ವರೆಗೆ ಮಾರಾಟವಾಗಿದೆ. ಆದರೆ, ಕಳೆದ 4-5 ದಿನಗಳಿಂದ ಬೆಲೆ ಸಂಪೂರ್ಣ ಕುಸಿದಿದೆ. ಡಿ.16 ಸೋಮವಾರ ಕ್ವಿಂಟಾಲ್‌ಗೆ ಸರಾಸರಿ 8500ರೂ. ಮಂಗಳವಾರ 8700ರೂ. ಬುಧವಾರ 9200, ಗುರುವಾರ 9000, ಶುಕ್ರವಾರ 8900 ಹಾಗೂ ಶನಿವಾರ 9100ರೂ.ಗೆ ಬೆಲೆ ಕುಸಿತಗೊಂಡಿದೆ. ಒಂದೇ ವಾರದಲ್ಲಿ ಕ್ವಿಂಟಾಲ್‌ಗೆ 1500ರಿಂದ 1800ರೂ.ವರೆಗೆ ಕುಸಿತಗೊಂಡಿದ್ದು ಕೃಷಿಕರ ನಿದ್ದೆಗೆಡಿಸಿದೆ. ಸರ್ಕಾರ ಖರೀದಿ ಕೇಂದ್ರ ತೆರೆದು ಕನಿಷ್ಠ 10ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎನ್ನುವ ಕೂಗು ಯಾರ ಕಿವಿಗೂ ಬಿದ್ದಿಲ್ಲ. ಇದರಿಂದ ರೈತರು ಕಂಗಲಾಗಿದ್ದು ರಾಶಿಯನ್ನು ಹೊಲದಲ್ಲೇ ಮುಚ್ಚಿಟ್ಟಿದ್ದಾರೆ.

ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಕುತಂತ್ರ ನಡೆಸಿ ಬೆಲೆ ಇಳಿಕೆ ಮಾಡಿದ್ದು ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಡಿಸೆಂಬರ್‌ನಲ್ಲಿ 10500ರೂ. ಇದ್ದ ತೊಗರಿ ಬೆಲೆ ಈವಾರ 8500ರೂಗೆ ಇಳಿಕೆ ಮಾಡಿದ್ದಾರೆ. ಕ್ವಿಂಟಾಲ್‌ಗೆ 2 ಸಾವಿರ ಕುಸಿದರೆ ರೈತರು ದಿಕ್ಕೆ ತೋಚದಂತಾಗಿದೆ. ಭತ್ತದ ರೇಟ್ 200 ರೂ. ಕುಸಿದೆ. ಸರ್ಕಾರ ತಕ್ಷಣ ತೊಗರಿಗೆ 10 ಸಾವಿರ, ಭತ್ತಕ್ಕೆ ಕನಿಷ್ಠ 1600 ರೂ. ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ತೆರೆಯಬೇಕು. |ಪ್ರಭಾಕರ ಪಾಟೀಲ್ ಇಂಗಳದಾಳ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರೈತರ ಬೇಡಿಕೆ ಮೇರೆಗೆ ತಾಲೂಕಿನ ನಾಲ್ಕು ಕಡೆ ಹತ್ತಿ ಖರೀದಿ ಕೇಂದ್ರ ತೆರೆಯಲಾಗಿದೆ. ತೊಗರಿ, ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ರೈತರು ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. | ಚನ್ನಮಲ್ಲಪ್ಪ ಘಂಟಿ, ತಹಸೀಲ್ದಾರ್, ದೇವದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net