

ದೇವದುರ್ಗ: ನಾಗರ ಪಂಚಮಿ ಹಬ್ಬವನ್ನು ಪಟ್ಟಣ ಸೇರಿ ತಾಲೂಕಾದ್ಯಂತ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.
ಸ್ಥಳೀಯ ಶ್ರೀರಾಮ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ, ಆಂಜನೇಯ ದೇವಸ್ಥಾನ, ಶಂಭುಲಿಂಗೇಶ್ವರ ದೇವಸ್ಥಾನ, ಕಪಿಲ ಸಿದ್ಧರಾಮೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ನಾಗರ ಮೂರ್ತಿಗೆ ಮಹಿಳೆಯರು ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲದ ಹಾಲು ಹಾಕಿ ಭಕ್ತಿಯಿಂದ ಪ್ರಾರ್ಥಿಸಿದರು.
ನಂತರ ಹಬ್ಬಕ್ಕಾಗಿ ಮಾಡಿದ್ದ ಸಿಹಿ ತಿನಿಸು ಅರ್ಪಿಸಿದರು. ಗಬ್ಬೂರಿನ ಬೂದಿ ಬಸವೇಶ್ವರ ದೇವಸ್ಥಾನ, ಜಾಲಹಳ್ಳಿಯ ಜಯ ಶಾಂತಲಿಂಗೇಶ್ವರ ದೇವಸ್ಥಾನ, ಲಕ್ಷ್ಮೀರಂಗನಾಥ, ಮಸರಕಲ್ ಮರಸಲಿಂಗೇಶ್ವರ, ಕೊಪ್ಪರದ ಲಕ್ಷ್ಮೀನರಸಿಂಹ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.